ಬರಗಾಲ ಪೀಡಿತ ರೈತರಿಗೆ ತಕ್ಷಣ ₹50 ಸಾವಿರ ಪರಿಹಾರ ನೀಡುವಂತೆ ಒತ್ತಾಯ

ಜೇವರ್ಗಿ, ಅ.6: ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುತ್ತಿರುವ ದಿನಗೂಲಿಯನ್ನು ₹700ಕ್ಕೆ ಹೆಚ್ಚಿಸಬೇಕು ಹಾಗೂ ವರ್ಷದಲ್ಲಿ ಕನಿಷ್ಠ 250 ದಿನಗಳ ಕಾಲ ಕೆಲಸ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುಭಾಷ್ ಹೊಸಮನಿ ಆಗ್ರಹಿಸಿದರು.
ತಾಲ್ಲೂಕಿನ ಹರವಾಳ ಗ್ರಾಮದಲ್ಲಿ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದು ಕೃಷಿ ಕೂಲಿ ಕಾರ್ಮಿಕರು ಮತ್ತು ಬಡ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಯೋಜನೆಯಡಿ ಜನರಿಗೆ ಸಮರ್ಪಕವಾಗಿ ಉದ್ಯೋಗ ದೊರೆಯುತ್ತಿಲ್ಲ. ಆದ್ದರಿಂದ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಯಾವುದೇ ಬದಲಾವಣೆ ಮಾಡದೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಸರ್ಕಾರ ನಿಗದಿಪಡಿಸಿರುವ 125 ದಿನಗಳ ಬದಲಾಗಿ ಪ್ರತಿದಿನ ಕೆಲಸ ಒದಗಿಸುವಂತೆ ಅವರು ಆಗ್ರಹಿಸಿದರು. ಪ್ರಸಕ್ತ ವರ್ಷ ತೀವ್ರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಬಡ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು ಅಕ್ಕಿ, ಜೋಳ ಸೇರಿದಂತೆ ಅಗತ್ಯ ಧಾನ್ಯಗಳನ್ನು ವಿತರಿಸಬೇಕು. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ₹50 ಸಾವಿರ ಪರಿಹಾರಕ್ಕೆ ಒತ್ತಾಯ
ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ಬಡ ರೈತರಿಗೆ ಸರ್ಕಾರ ₹2,500 ಪರಿಹಾರ ಘೋಷಣೆ ಮಾಡಿದ್ದರೂ, ಆ ಹಣ ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ ಎಂದು ಸುಭಾಷ್ ಹೊಸಮನಿ ಹೇಳಿದರು. ಆದ್ದರಿಂದ ಪ್ರತಿಯೊಬ್ಬ ರೈತರಿಗೆ ಕನಿಷ್ಠ ₹50 ಸಾವಿರ ಪರಿಹಾರವನ್ನು ತಕ್ಷಣ ವಿತರಿಸಬೇಕು ಎಂದು ಆಗ್ರಹಿಸಿದರು.
ಬರಗಾಲ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಅಗತ್ಯ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ನಿರಂತರವಾಗಿ ನಡೆಸಬೇಕು ಎಂದು ಹೇಳಿದರು.
ಅಂಗವಿಕಲರ ಮಾಶಾಸನ ಬಿಡುಗಡೆಗೆ ಆಗ್ರಹ
ಅಂಗವಿಕಲರು, ವೃದ್ಧರು ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಕಳೆದ ಐದಾರು ತಿಂಗಳಿಂದ ಮಾಸಾಶನ ಬಿಡುಗಡೆಯಾಗದೆ ಇರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಯೋವೃದ್ಧರು ಮತ್ತು ಅಂಗವಿಕಲರು ಮಾಸಾಶನದ ಹಣವನ್ನೇ ಅವಲಂಬಿಸಿರುವುದರಿಂದ ಕೂಡಲೇ ಬಾಕಿ ಮಾಸಾಶನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾವೇಶದಲ್ಲಿ ಸಿದ್ದಣ್ಣ ಅಡ್ವಾಣಿ, ಧೂಳಪ್ಪ ಪರೇಟ್, ದೇವರಾಜ ದೇವರನಾದಗಿ, ಶರಣಪ್ಪ ದೊರೆ, ಭೂತಾಳೆ ಯಂಕಂಚಿ ನಾಗರಾಜ್, ಅಣ್ಣೂರು ಶ್ರೀಮಂತ, ಬಾದನಹಳ್ಳಿ ಶರಣಬಸಪ್ಪ ಕೋಣೆ, ಅಶೋಕ ರಾಥೋಡ್, ಮಹಿಳಾ ಮುಖಂಡರಾದ ಶಾಂತಾಬಾಯಿ ಬಾದನಹಳ್ಳಿ, ಇಮಾಮಬೀ, ಜಗದೇವಿ, ಶಾರದಾಬಾಯಿ ಕೋಣೆ, ಅಕ್ಕಮ್ಮ ಹೆಣ್ಣೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.



