ತಾರಾನಗರದಲ್ಲಿ 13 ಅಡಿ ಎತ್ತರದ ಗಣೇಶಮೂರ್ತಿ ವಿಸರ್ಜನೆ ಸಂಭ್ರಮ

ಜೇವರ್ಗಿ, ಅ.6: ತಾಲ್ಲೂಕಿನ ತಾರಾನಗರ ಬಡಾವಣೆಯಲ್ಲಿ ತಾರಾನಗರ ಮಿತ್ರ ಮಂಡಳಿ, ಮಹಾಲಕ್ಷ್ಮಿ ಬಡಾವಣೆಯ ಯುವಕರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ 13 ಅಡಿ ಎತ್ತರದ ಗಣೇಶಮೂರ್ತಿಯನ್ನು ಮಂಗಳವಾರ ವಿಜೃಂಭಣೆಯಿಂದ ವಿಸರ್ಜಿಸಲಾಯಿತು.
ಗಣೇಶೋತ್ಸವ ಹಾಗೂ ವಿಸರ್ಜನಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಮಹಾ ಅನ್ನದಾಸೋಹ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಸಾರ್ವಜನಿಕರು ಹಾಗೂ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರನ್ನು ರಂಜಿಸಲು ರಸಸಂಜೆ ಹಾಗೂ ಹಾಸ್ಯಮಂಜರಿ ಆಯೋಜಿಸಲಾಗಿತ್ತು. ಮಕ್ಕಳಿಂದ ನಡೆದ ಮನಮೋಹಕ ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದ ವೀಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಇದಲ್ಲದೆ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಕುರ್ಚಿ ಆಟ, ಚಿಕ್ಕ ಮಕ್ಕಳಿಗೆ ಕೆರೆ–ದಡ ಹಾಗೂ ಕಪ್ಪೆ ಓಟ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಾಗಿ ರೋಚಕ ಮೂರು ಕಾಲಿನ ಓಟ ಹಾಗೂ ಮಹಿಳೆಯರಿಗಾಗಿ ವರ್ಣರಂಜಿತ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ವಿಜೇತರು ಹಾಗೂ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಸಿದ್ದಲಿಂಗ ಮಹೂರ್, ಕರಿಬಸಪ್ಪ, ಭುವನ್ ಮತ್ತು ಭೀಮರಾಯ ಗುಡೂರ್ ಅವರನ್ನು ಸನ್ಮಾನಿಸಲಾಯಿತು.
ಯುವಕರು, ಮಹಿಳೆಯರು, ಮಕ್ಕಳ ಉತ್ಸಾಹದ ಪಾಲ್ಗೊಳ್ಳುವಿಕೆ
ಆಯೋಜಕರಾದ ವಕೀಲ ಮಲ್ಲಿಕಾರ್ಜುನ ಸುಗೂರು, ಮಲ್ಲಿಕಾರ್ಜುನ ಹೊನ್ನೂರು, ಸಿದ್ದು ಹಾಲಕಾಯಿ, ಅನವೀರ ಗದ್ದಗಿ, ಶಿಕ್ಷಕರಾದ ಶಿವಲಿಂಗಪ್ಪ, ಸುಭಾಷ್ ಹಗರಗಿ, ಸಿದ್ದವೀರಪ್ಪ, ಸಿದ್ದು ಪೂಜಾರಿ, ವೀರೇಶ ಹಳ್ಳಿ, ಅನಿಲ್ ಯಾಳವಾರ, ಸಿದ್ದು ಯಾಳವಾರ, ಈರಣ್ಣ ನರಬೋಳಿ, ಶಿವಲಿಂಗಪ್ಪ ಸಕ್ರಪ್ಪ ಪೂಜಾರಿ, ನಂದಕುಮಾರ ದೊರೆ, ಸಿದ್ದು ಹಡಪದ, ವೀರೇಶ ಹಿರೇಮಠ, ಶಿವಕುಮಾರ ಯಾದಗಿರಿ, ಪವಿತ್ರ ರೆಡ್ಡಿ ಹಾಗೂ ಮಹೇಶ್ವರಿ ಬೀದರ್ ಸೇರಿದಂತೆ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ನಾಗರಾಜ ವಿ.ಟಿ., ರಾಜು ಮುದ್ದಡಗಿ ಸೇರಿದಂತೆ ಹಲವರು ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಯ ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ನೂರಾರು ನಾಗರಿಕರು ಗಣೇಶಮೂರ್ತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ಹಾಗೂ ಅನ್ನದಾಸೋಹದೊಂದಿಗೆ ನಡೆದ ಗಣೇಶೋತ್ಸವವು ಗಮನ ಸೆಳೆಯಿತು.



