ಜೇವರ್ಗಿ ತಾರಾನಗರ, ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಳ್ಳರ ಉಪಟಳ: ಕ್ರಮಕ್ಕೆ ಆಗ್ರಹ

ಜೇವರ್ಗಿ, ಅ. 6: ಪಟ್ಟಣದ ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಮಾತ್ರವಲ್ಲದೆ, ಜನಸಾಮಾನ್ಯರು ಓಡಾಡುವ ಹಗಲು ವೇಳೆಯಲ್ಲಿಯೂ ಸರಣಿ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಡೆಯುತ್ತಿವೆ ಎಂದು ಬಡಾವಣೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಅಲ್ಪಾವಧಿಯಲ್ಲೇ ಸುಮಾರು 10ರಿಂದ 12 ಬಾರಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಸ್ಥಳೀಯ ನಿವಾಸಿಗಳನ್ನು ಕಂಗಾಲಾಗಿಸಿದೆ. ಕಳ್ಳರ ಹಾವಳಿಯಿಂದ ಬಡಾವಣೆಯ ಸಾರ್ವಜನಿಕರು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೆ ಬೀಗ ಹಾಕಿ ಹೊರಗೆ ಹೋಗಲೂ ಜನರು ಹೆದರುವಂತಾಗಿದೆ.
ಪೊಲೀಸರಿಗೆ ಮನವಿ
ಸರಣಿ ಕಳ್ಳತನ ಹಾಗೂ ಅಪರಾಧ ಕೃತ್ಯಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ ತಾರಾನಗರ ಮತ್ತು ಮಹಾಲಕ್ಷ್ಮಿ ಬಡಾವಣೆಗಳ ನಿವಾಸಿಗಳು ನಿಯೋಗದೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಜಂಟಿ ಮನವಿ ಪತ್ರ ಸಲ್ಲಿಸಿದರು.
ಬಡಾವಣೆಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ನಾಗರಿಕರ ಆಸ್ತಿ–ಪಾಸ್ತಿ ರಕ್ಷಿಸಲು ಪೊಲೀಸ್ ಇಲಾಖೆ ತಕ್ಷಣ ಸೂಕ್ತ ಹಾಗೂ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಬಡಾವಣೆಗಳ ಸುರಕ್ಷತೆಗಾಗಿ ತಕ್ಷಣವೇ ಗಸ್ತು ಕೇಂದ್ರ ಸ್ಥಾಪಿಸಬೇಕು. ರಾತ್ರಿ ವೇಳೆಯಲ್ಲಿ ಯಾವುದೇ ಲೋಪವಿಲ್ಲದೆ ನಿರಂತರ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸಂಚಾರಿ ಗಸ್ತು ಪುಸ್ತಕ ಇಟ್ಟು ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಮೇಲಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದರು.
ಸರಣಿ ಕಳ್ಳತನದ ಹಿಂದೆ ಇರುವ ಅಪರಾಧಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸುವ ಮೂಲಕ ಬಡಾವಣೆಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಬೇಕು ಎಂದು ಅವರು ಆಗ್ರಹಿಸಿದರು.
ಶಾಶ್ವತ ಪರಿಹಾರಕ್ಕೆ ಒತ್ತಾಯ
ಕಳ್ಳತನದಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಪೊಲೀಸ್ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖ ವಕೀಲರಾದ ಮಲ್ಲಿಕಾರ್ಜುನ ಸೂರುಗೂರು, ಅಣವೀರ ಗದ್ದಗಿ, ಶಿಕ್ಷಕರಾದ ಶಿವಲಿಂಗಪ್ಪ, ಸಿದ್ದು ಪೂಜಾರಿ, ವೀರೇಶ ಹಳ್ಳಿ, ಅನಿಲ್ ಯಾಳವಾರ, ಸಿದ್ದು ಯಾಳವಾರ, ಈರಣ್ಣ ನರಿಬೋಳಿ, ಸಕ್ರಪ್ಪ ಪೂಜಾರಿ, ವೀರೇಶ ಹಿರೇಮಠ, ನಾಗರಾಜ ವಿ.ಟಿ., ರಾಜು ಮುದ್ದಡಗಿ ಸೇರಿದಂತೆ ಬಡಾವಣೆಯ ಹಲವಾರು ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.



