ಶಿಕ್ಷಕರ ಕ್ಷೇತ್ರದ ಚುನಾವಣೆ: ನೈಜ ಸಮಸ್ಯೆಗಳ ಚರ್ಚೆ ಇಲ್ಲವೆಂದು ಅಸಮಾಧಾನ

ಕಲಬುರಗಿ, ಅ.6: ಈಶಾನ್ಯ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳ ಕುರಿತು ಸಮರ್ಪಕ ಚರ್ಚೆ ನಡೆಯುತ್ತಿಲ್ಲ ಎಂದು ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ವಿನೋದಕುಮಾರ್ ಜೇನವೇರಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಅನುಚ್ಛೇದ 171(3)(ಸಿ)ರ ನಿಯಮಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಶಿಕ್ಷಕರ ತರಬೇತಿ ಪಡೆದವರು ಹಾಗೂ ನೇಮಕಾತಿ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳು ಶಿಕ್ಷಕರ ಕ್ಷೇತ್ರದ ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ ಎಂದು ಅವರು ಹೇಳಿದರು.
ಇದರಿಂದ ಶಿಕ್ಷಣ ಕ್ಷೇತ್ರದ ಬಹುಸಂಖ್ಯಾತರ ಸಮಸ್ಯೆಗಳು ಚುನಾವಣಾ ಚರ್ಚೆಗೆ ಬರುತ್ತಿಲ್ಲ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ನೈಜ ಸಮಸ್ಯೆಗಳೇ ಪ್ರಮುಖ ವಿಚಾರಗಳಾಗಬೇಕು ಎಂದು ಅವರು ಆಗ್ರಹಿಸಿದರು.
ನೇಮಕಾತಿ ಸೇರಿದಂತೆ ಹಲವು ಸಮಸ್ಯೆ
ಬಿ.ಎಡ್ ಸೇರಿದಂತೆ ವಿವಿಧ ಶಿಕ್ಷಕರ ತರಬೇತಿ ಪಡೆದ ನಿರುದ್ಯೋಗಿಗಳ ನೇಮಕಾತಿ ವಿಳಂಬ, ಖಾಲಿ ಹುದ್ದೆಗಳ ಭರ್ತಿ, ವಯೋಮಿತಿ, ನೇಮಕಾತಿಯಲ್ಲಿನ ಅಕ್ರಮಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇನ್ನೂ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ಜೇನವೇರಿ ಹೇಳಿದರು.
ಈ ಎಲ್ಲ ಸಮಸ್ಯೆಗಳು ಶಿಕ್ಷಕರ ಕ್ಷೇತ್ರದ ಚುನಾವಣೆಯ ಪ್ರಮುಖ ವಿಚಾರಗಳಾಗಬೇಕು. ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಈ ವಿಚಾರಗಳ ಕುರಿತು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಮತದಾನದ ಅವಕಾಶ ವಿಸ್ತರಣೆಗೆ ಒತ್ತಾಯ
ಅನುಚ್ಛೇದ 171(3)(ಬಿ) ಮತ್ತು (ಸಿ)ಗೆ ಸೂಕ್ತ ತಿದ್ದುಪಡಿ ತಂದು ಪ್ರಾಥಮಿಕ ಶಾಲಾ ಶಿಕ್ಷಕರೂ ಸೇರಿದಂತೆ ಅರ್ಹ ಎಲ್ಲ ಶಿಕ್ಷಕ ವರ್ಗಗಳಿಗೆ ಶಿಕ್ಷಕರ ಕ್ಷೇತ್ರದಲ್ಲಿ ಮತದಾನದ ಅವಕಾಶ ಕಲ್ಪಿಸಬೇಕು ಎಂದು ವಿನೋದಕುಮಾರ್ ಜೇನವೇರಿ ಆಗ್ರಹಿಸಿದರು.
ಶಿಕ್ಷಕರ ಕ್ಷೇತ್ರದಲ್ಲಿ ಬಹುಸಂಖ್ಯಾತ ಶಿಕ್ಷಕರಿಗೆ ಮತದಾನದ ಹಕ್ಕು ಇಲ್ಲದಿರುವುದರಿಂದ ಅವರ ನೈಜ ಸಮಸ್ಯೆಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಬಿಂಬಿಸುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರದಿದ್ದರೆ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ನೈಜ ಸಮಸ್ಯೆಗಳು ಮುಂದೆಯೂ ನಿರ್ಲಕ್ಷ್ಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದ ಎಲ್ಲ ವರ್ಗಗಳಿಗೂ ನ್ಯಾಯ ದೊರೆಯುವಂತೆ ಸಂವಿಧಾನದ ಸಂಬಂಧಿತ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಅವರು ಒತ್ತಾಯಿಸಿದರು.



