ಅ.25ರಂದು ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ರಾಜ್ಯ ಮಟ್ಟದ ವಧು–ವರರ ಸಮಾವೇಶ

ಕಲಬುರಗಿ, ಅ.6: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ 25ರಂದು ವೀರಶೈವ ಲಿಂಗಾಯತ ಸಮಾಜದ ರಾಜ್ಯ ಮಟ್ಟದ ವಧು–ವರರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ವೀರಶೈವ ಸಮಾಜದ ಜಿಲ್ಲಾ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಲ್ಲಿ ವಾಸಿಸುತ್ತಿರುವ ವೀರಶೈವ ಲಿಂಗಾಯತ ಸಮಾಜದ ವಧು–ವರರು ಸಮಾವೇಶದಲ್ಲಿ ಭಾಗವಹಿಸಿ, ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಜಂಗಮ, ಪಂಚಮಸಾಲಿ, ದೀಕ್ಷಾ ಲಿಂಗಾಯತ, ಆದಿ ಲಿಂಗಾಯತ, ಬಣಜಿಗ, ಬಣಗಾರ, ರೆಡ್ಡಿ ಲಿಂಗಾಯತ, ನೇಕರ, ಕುಂಬಾರ, ಹಟ್ಟಗಾರ, ಮಾಲಗಾರ, ಗಾಣಿಗ, ಸಜ್ಜನ ಗಾಣಿಗ, ಕರಿಕುಳ ಗಾಣಿಗ, ಕರುವಿನ ಶೆಟ್ಟಿ, ಹೂಗಾರ ಹಾಗೂ ಕುಡು ಒಕ್ಕಲಿಗ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ವಧು–ವರರು ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕದ, ವಿಶೇಷವಾಗಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿ ನೆಲೆಸಿರುವ ಸಮಾಜದ ಬಂಧುಗಳು, ವೈದ್ಯರು, ಎಂಜಿನಿಯರ್ಗಳು, ಸರ್ಕಾರಿ ನೌಕರರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ರೈತ ಕುಟುಂಬಗಳ ವಧು–ವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ವಿಧುರ, ವಿಧವೆ ಹಾಗೂ ವಿಚ್ಛೇದಿತರಿಗೂ ಅವಕಾಶ
ಪುನರ್ಮದುವೆ ಬಯಸುವವರು, ವಿಚ್ಛೇದಿತರು, ವಿಧುರರು, ವಿಧವೆಯರು ಹಾಗೂ ವಿವಾಹ ವಿಳಂಬವಾಗಿರುವ ವಧು–ವರರಿಗೂ ಸಮಾವೇಶದಲ್ಲಿ ಸೂಕ್ತ ವೇದಿಕೆ ಕಲ್ಪಿಸಲಾಗುವುದು. ಅವರು ಕೂಡ ಭಾಗವಹಿಸಿ ತಮ್ಮ ಜೀವನಕ್ಕೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಅರುಣಕುಮಾರ ಪಾಟೀಲ ಹೇಳಿದರು.
ಸಮಾಜದ ವಧು–ವರರಿಗೆ ಪರಸ್ಪರ ಪರಿಚಯವಾಗಿ ಸೂಕ್ತ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಲು ಈ ಸಮಾವೇಶ ಉತ್ತಮ ಅವಕಾಶವಾಗಲಿದೆ. ಆದ್ದರಿಂದ ಸಮಾಜದ ಎಲ್ಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ದೇಶಮುಖ, ರಮೇಶ ತಿಪ್ಪನೂರು, ವೀರೇಶ ಗಾಣಧಾಳಮಠ, ಮಹಾದೇವ ಜಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.



