ಸೇಡಂಗೆ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ಆಗಮನ

ಸೇಡಂ, ಅ. 6: ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಭಾರತ, ಜಾಗತಿಕ ಡಾ. ಅಂಬೇಡ್ಕರ್ ಬೌದ್ಧ ಮಿಷನ್, ಅಮೆರಿಕ, ಅಖಿಲ ಭಾರತ ಡಾ. ಅಂಬೇಡ್ಕರ್ ಭಿಕ್ಷು ಸಂಘ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ, ಸನ್ನತಿ–ಕಂಗಣಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ಸೋಮವಾರ ಪಟ್ಟಣಕ್ಕೆ ಆಗಮಿಸಿತು.
ಈ ಪ್ರಯುಕ್ತ ಆಯೋಜಿಸಿದ್ದ ಧಮ್ಮ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶಾಕ್ಯ ಬೋಧಿಧಮ್ಮ ಅವರು, ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಮಾನತೆಯನ್ನು ಕಾಪಾಡುವ ಅಗತ್ಯವಿದೆ. ಭಗವಾನ್ ಬುದ್ಧರ ಶಾಂತಿ ಮತ್ತು ಕರುಣೆಯ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮವನ್ನು ಸ್ವೀಕರಿಸಿ, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಆಧಾರದ ಮೇಲೆ ಸಮಾಜ ನಿರ್ಮಾಣದ ಮಹತ್ವವನ್ನು ಸಾರಿದ್ದರು. ಅವರ ಆಶಯದಂತೆ ಸಮಸಮಾಜ ನಿರ್ಮಾಣ ಹಾಗೂ ಬುದ್ಧನ ಧಮ್ಮದ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ದೇಶದಲ್ಲಿ ಯಾವುದೇ ರೀತಿಯ ಅಶಾಂತಿ, ದ್ವೇಷ ಅಥವಾ ಅಸಮಾನತೆ ಹೆಚ್ಚಾಗದಂತೆ ಎಲ್ಲರೂ ಸಂವಿಧಾನದ ಆಶಯಗಳನ್ನು ಗೌರವಿಸಬೇಕು. ಬಾಬಾಸಾಹೇಬರು ನೀಡಿದ ಸಂವಿಧಾನದ ಚೌಕಟ್ಟಿನಲ್ಲಿಯೇ ದೇಶದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಬುದ್ಧನ ಶಾಂತಿ, ಕರುಣೆ, ಸಮಾನತೆ ಹಾಗೂ ಸಹೋದರತ್ವದ ಸಂದೇಶವನ್ನು ಜನರಲ್ಲಿ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಧಮ್ಮ ಜನಜಾಗೃತಿ ಯಾತ್ರೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜೈಭೀಮ್ ಉಡಗಿ ಮಾತನಾಡಿ, ಬಾಬಾಸಾಹೇಬರ ವಿಚಾರಧಾರೆ ಹಾಗೂ ಬುದ್ಧನ ಧಮ್ಮದ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ ಎಂದರು.
ನಾಗರಾಜ ಉಡಗಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ವಿಜಯಕುಮಾರ ಶರ್ಮಾ, ರವಿ ಜಡೇಕರ, ವಿಲಾಸ ಗೌತಮ ನಿಡುಗುಂದ, ಸಂದೀಪ್ ಕಟ್ಟಿವಾಡಿ, ಬಸವರಾಜ ಸಾಗರ, ಪ್ರಶಾಂತ ಸೇಡಮಕರ, ಸಿದ್ದು ದೊಣ್ಣೂರು, ಅರುಣಕುಮಾರ ಮೂಡಬೂಳಕರ, ಶ್ರೀಕಾಂತ ಜಾಪನೂರು, ಶ್ರೀನಿವಾಸ ಸಂಗಾವಿ, ಅಂಬರೀಶ್ ಎಂ. ಗುಡಿ, ಗೌತಮ ಹಳ್ಳಿ, ಈಶ್ವರ ಮಾಧವಾರ, ವಿಶ್ವ ಸಂಗಾವಿ, ಮಹಾದೇವ ಉಡಗಿ ಸೇರಿದಂತೆ ಹಲವರು ಹಾಗೂ ಬೌದ್ಧ ಧಮ್ಮದ ಅನುಯಾಯಿಗಳು ಉಪಸ್ಥಿತರಿದ್ದರು.



