ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ: ರಘು ಕೌಟಿಲ್ಯ

ಕಲಬುರಗಿ, ಅ.5– ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಆರೋಪಿಸಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಯಕ ಸಮುದಾಯಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ ನೀಡುತ್ತಿದ್ದ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ದೂರಿದರು.
ತಮ್ಮ ಬೆವರಿನ ಹನಿಯನ್ನೇ ಬಂಡವಾಳವಾಗಿಸಿಕೊಂಡು ಸಮಾಜದ ಪ್ರತಿಯೊಂದು ಹಂತದಲ್ಲೂ ಶ್ರಮಿಸುತ್ತಿರುವ ಕಾಯಕ ಸಮುದಾಯಗಳು ನಮ್ಮ ಸಂಸ್ಕೃತಿ ಹಾಗೂ ಆರ್ಥಿಕತೆಯ ಜೀವನಾಡಿಯಾಗಿವೆ. ಈ ನೆಲದ ಮಣ್ಣಿನ ಮಕ್ಕಳಾದ ಹಿಂದುಳಿದ ಸಮುದಾಯಗಳ ಹಕ್ಕುಗಳ ರಕ್ಷಣೆ, ಅವರ ಸಬಲೀಕರಣ ಹಾಗೂ ಸಂಘಟನೆ ರಾಜ್ಯದ ಪ್ರಗತಿಯ ಪ್ರಮುಖ ಆಶಯವಾಗಬೇಕು ಎಂದು ಹೇಳಿದರು.
ಕಾಯಕ ಸಮುದಾಯಗಳ ಶ್ರಮ ಮತ್ತು ಕೊಡುಗೆ ಸಮಾಜ ಹಾಗೂ ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ವಿವಿಧ ಹಿಂದುಳಿದ ಹಾಗೂ ಶ್ರಮಿಕ ವರ್ಗಗಳ ಹಿತರಕ್ಷಣೆ, ಅವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಬಿಜೆಪಿ ಬದ್ಧವಾಗಿದೆ ಎಂದು ರಘು ಕೌಟಿಲ್ಯ ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅಗತ್ಯವಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲು ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಹಿಂದುಳಿದ ಸಮುದಾಯಗಳ ಹಕ್ಕುಗಳು ಮತ್ತು ಸೌಲಭ್ಯಗಳಿಗಾಗಿ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಲಿದೆ ಎಂದರು.
ಸಮಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಸಂಸದ ಉಮೇಶ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ವಿಧಾನ ಪರಿಷತ್ ಸದಸ್ಯ ರಾಜಾ ಪಾಟೀಲ, ಮಾಜಿ ಶಾಸಕ ಸುಭಾಷ್ ಗುತ್ತೇದಾರ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಕೇರಿ, ಕಾರ್ಯದರ್ಶಿಗಳಾದ ಈರಣ್ಣ ಹಡಪದ್, ವೆಂಕಟೇಶ್ ಉಪ್ಪಾರ, ದೇವೇಂದ್ರ ದೇಸಾಯಿ ಕಲ್ಲೂರು ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



