ಬಡವರ ಸೇವೆ ಮಾಡುವ ಮೂಲಕ ಭಗವಂತನನ್ನು ಕಾಣಬಹುದು: ಲಕ್ಷ್ಮೀ ಪಾಟೀಲ ರೇವೂರ

ಕಲಬುರಗಿ, ಅ.5– ಸಮಾಜದಲ್ಲಿರುವ ಬಡವರು ಹಾಗೂ ಅಗತ್ಯವಿರುವವರಿಗೆ ಸೇವೆ ಮಾಡುವ ಮೂಲಕ ಭಗವಂತನನ್ನು ಕಾಣಬಹುದು ಎಂದು ಸಮಾಜ ಸೇವಕಿ ಶ್ರೀಮತಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ನಗರದ ಶ್ರೀ ದಾನೇಶ್ವರಿ ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣಾ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸೇವಾ ಮನೋಭಾವದಿಂದ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಗಂಭೀರವಾಗಿದೆ. ರೈತರು, ಕೃಷಿ ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಸಮಾಜದ ವಿವಿಧ ವರ್ಗಗಳು ಮುಂದಾಗುವುದು ಅತ್ಯಗತ್ಯ ಎಂದು ಹೇಳಿದರು.
ಶ್ರೀ ದಾನೇಶ್ವರಿ ಮಹಿಳಾ ಸಂಸ್ಥೆಯವರು ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ಲಕ್ಷ್ಮೀ ಪಾಟೀಲ ರೇವೂರ ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ವೀರು ಸ್ವಾಮಿ ನರೋಣಾ, ಮುಖಂಡರಾದ ನಾಗಲಿಂಗಯ್ಯ ಮಠಪತಿ, ರಾಚೋಟಯ್ಯ ಹಿರೇಮಠ, ಶ್ರೀಮತಿ ಸಂಗಮ್ಮ ಅಡಕಿ ಹಾಗೂ ವಿಶ್ವನಾಥ ಸಾಲಿಮಠ ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ಅಗತ್ಯವಿರುವ ಬಡ ಮಹಿಳೆಯರಿಗೆ ದಿನಬಳಕೆಯ ವಸ್ತುಗಳನ್ನು ಒಳಗೊಂಡ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು



