ಜಿಲ್ಲಾಸುದ್ದಿ

ಹೇರೂರ ವೃತ್ತದಲ್ಲಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆಗೆ ವಿರೋಧ

ಚಿತ್ತಾಪುರ, ಅ.2- ಕಲಬುರಗಿ ನಗರದ ಹೈಕೋರ್ಟ್‌ನ ಅಫಜಲಪುರ ರಸ್ತೆಯ ಹೇರೂರ ವೃತ್ತದಲ್ಲಿ ಕೋಲಿ–ಕಬ್ಬಲಿಗ ಸಮಾಜದ ನಾಯಕ ದಿ. ವಿಠ್ಠಲ ಹೇರೂರ ಅವರ ಹೆಸರಿನ ನಾಮಫಲಕವಿದ್ದ ಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ತಾಲ್ಲೂಕು ಕೋಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ ಅವರ ನೇತೃತ್ವದಲ್ಲಿ ಮುಖಂಡರು ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ವೃತ್ತದಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಮುಖಂಡರು ಮಾತನಾಡಿ, ದಿ. ವಿಠ್ಠಲ ಹೇರೂರ ಅವರ ಹೆಸರಿನ ನಾಮಫಲಕವಿದ್ದರೂ ಕೆಲವರು ರಾತ್ರಿ ವೇಳೆ ಸಿದ್ದರಾಮಯ್ಯ ಅವರ ಪ್ರತಿಮೆ ತಂದು ಇಟ್ಟಿದ್ದು, ಬಳಿಕ ಮಹಾನಗರ ಪಾಲಿಕೆ ಅದನ್ನು ತಕ್ಷಣ ತೆರವುಗೊಳಿಸಿದೆ. ಈ ಕ್ರಮವು ಕೋಲಿ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ದಿ. ವಿಠ್ಠಲ ಹೇರೂರ ಅವರಿಗೆ ಮಾಡಿರುವ ಅವಮಾನವನ್ನು ಸಮಾಜ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 2013ರಿಂದಲೂ ಸದರಿ ವೃತ್ತದಲ್ಲಿ ದಿ. ವಿಠ್ಠಲ ಹೇರೂರ ಅವರ ಭಾವಚಿತ್ರವಿರುವ ನಾಮಫಲಕ ಅಳವಡಿಸಿ, ಪ್ರತಿವರ್ಷ ಪುಣ್ಯಸ್ಮರಣೆ, ಜಯಂತಿ, ಅನ್ನದಾಸೋಹ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೃತ್ತವು ಈಗಾಗಲೇ ದಿ. ವಿಠ್ಠಲ ಹೇರೂರ ವೃತ್ತ ಎಂದೇ ಸಾರ್ವಜನಿಕವಾಗಿ ಗುರುತಿಸಿಕೊಂಡಿದೆ ಎಂದು ಮುಖಂಡರು ಹೇಳಿದರು.

ಒಂದು ಸಮಾಜದ ನಾಯಕನ ಹೆಸರಿನ ನಾಮಫಲಕವಿರುವ ಸ್ಥಳದಲ್ಲಿ ಮತ್ತೊಬ್ಬರ ಪ್ರತಿಮೆ ಸ್ಥಾಪಿಸುವ ಪ್ರಯತ್ನವು ಕೋಲಿ–ಕಬ್ಬಲಿಗ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಮವಾಗಿದೆ. ವೃತ್ತದಲ್ಲಿ ದಿ. ವಿಠ್ಠಲ ಹೇರೂರ ಅವರ ಪ್ರತಿಮೆ ಹೊರತುಪಡಿಸಿ ಬೇರೆ ಯಾವುದೇ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸರ್ಕಾರವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬಾರದು. ಕೋಲಿ–ಕಬ್ಬಲಿಗ ಸಮಾಜದ ಮನವಿಯನ್ನು ಕಡೆಗಣಿಸಿದರೆ ಸಮಾಜದವರು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ್, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ, ನಗರಾಧ್ಯಕ್ಷ ಪ್ರಭು ಹಲಕಟ್ಟಿ, ಮುಖಂಡರಾದ ಬಸವರಾಜ ಚಿನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಹನುಮಂತ ಸಂಕನೂರ್, ಲಕ್ಷ್ಮೀಕಾಂತ ಸಾಳಿ, ದೇವೇಂದ್ರ ಅರಳಕಲ್, ಭೀಮಣ್ಣ ಹೊತಿನಮಡಿ, ಶರಣಪ್ಪ ನಾಶಿ, ಮುನಿಯಪ್ಪ ಕೊಳ್ಳಿ, ಚಂದ್ರು ಕಾಳಗಿ, ದತ್ತು ಮೈನಾಡಕರ, ರಾಜು ಮುಧೋಳ, ಶರಣಪ್ಪ ಸಿದ್ರಾಮಗೋಳ, ಮಾರುತಿ ಇವಣಿ, ಶಿವಪ್ಪ ದೊಡ್ಡಮನಿ, ದಶರಥ ದೊಡ್ಡಮನಿ, ಮಲ್ಲು ಕೊಳಕೋರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button