ಜಿಲ್ಲಾಸುದ್ದಿ

ಎಸ್‌ಐಆರ್ ಅಕ್ರಮ ಆರೋಪ: ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಸತ್ಯಾಗ್ರಹ

ಕಲಬುರಗಿ, ಅ.2- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನಾಗರಿಕ ಹಕ್ಕುಗಳ ರಕ್ಷಣಾ ಆಂದೋಲನದ ಕಾರ್ಯಕರ್ತರು ನಗರದ ಟೌನ್‌ಹಾಲ್ ಮುಂಭಾಗದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಶುಕ್ರವಾರ ಸತ್ಯಾಗ್ರಹ ನಡೆಸಿದರು.

ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾಗಿರುವವರ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸಬೇಕು ಹಾಗೂ ಭಾರತ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃ ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಸಲಿಂ ಅಹ್ಮದ್ ಚಿತ್ತಾಪುರ, ಡಾ. ಮಹೇಶ್‌ಕುಮಾರ್ ರಾಠೋಡ್, ಕೆ. ನೀಲಾ, ಅಫಜಲ್ ಮಹಿಮೂದ್, ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಸೆಪ್ಟೆಂಬರ್ 23ರಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ, ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಹಾಗೂ ಮರುಸ್ಥಾಪನೆ ಮತ್ತು ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.

ಎಸ್‌ಐಆರ್ ವಿಚಾರವು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸೀಮಿತವಾಗಿಲ್ಲ. ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ಸಮಗ್ರತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಎದ್ದಿವೆ. ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ವಿಶ್ವಾಸಾರ್ಹತೆ ಕುರಿತು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಎಂದು ಅವರು ಆರೋಪಿಸಿದರು.

ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಕನಿಷ್ಠ 14 ಸಂದರ್ಭಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ ಹಾಗೂ ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಆಕ್ಷೇಪ ದಾಖಲಿಸಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಮತದಾರರ ದತ್ತಾಂಶವನ್ನು ಹಂತ ಹಂತವಾಗಿ ಕೇಂದ್ರೀಕರಿಸುವುದು ಹಾಗೂ ರಾಜ್ಯ ಮತ್ತು ಕ್ಷೇತ್ರ ಮಟ್ಟದ ಶಾಸನಬದ್ಧ ಅಧಿಕಾರಿಗಳ ಪ್ರವೇಶದ ಮೇಲಿನ ನಿರ್ಬಂಧಗಳು ಪ್ರಶ್ನಾರ್ಹವಾಗಿವೆ ಎಂದು ಅವರು ಆರೋಪಿಸಿದರು. ಗೋವಾದಲ್ಲಿ 97 ಮತದಾರರನ್ನು ಅನರ್ಹರೆಂದು ಗುರುತಿಸಿದ ನಿರ್ಧಾರಗಳನ್ನು ದಾಖಲಿಸದಂತೆ ತಂತ್ರಾಂಶದ ನಿರ್ಬಂಧಗಳು ಚುನಾವಣಾ ನೋಂದಣಿ ಅಧಿಕಾರಿಗಳನ್ನು ತಡೆದಿವೆ ಎಂಬ ವರದಿಯನ್ನೂ ಅವರು ಉಲ್ಲೇಖಿಸಿದರು.

ಮತದಾರರ ಕುರಿತು ಆಕ್ಷೇಪ ಸಲ್ಲಿಸಲು ಇರುವ ಅರ್ಜಿ ನಮೂನೆ–7ರ ಪ್ರಕ್ರಿಯೆಯನ್ನು ಕೆಲವು ಶಕ್ತಿಗಳು ದುರುಪಯೋಗಪಡಿಸಿಕೊಂಡು ನಾಗರಿಕರ ವಿರುದ್ಧ ತಪ್ಪು ಆರೋಪಗಳನ್ನು ಸಲ್ಲಿಸುತ್ತಿರುವ ಸಾಧ್ಯತೆಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮತದಾನದ ಹಕ್ಕು ಪಾರದರ್ಶಕ ಹಾಗೂ ಕೇಂದ್ರೀಕೃತ ನಿಯಂತ್ರಿತ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುವುದರಿಂದ ಚುನಾವಣಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆಯಾಗಬಾರದು. ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕು, ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು, ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾದ ಎಲ್ಲರ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸಬೇಕು ಹಾಗೂ ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪಾರದರ್ಶಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಚುನಾವಣಾ ಆಯುಕ್ತರ ನೇಮಕಾತಿಯ ಪ್ರಸ್ತುತ ವ್ಯವಸ್ಥೆಯನ್ನು ಬದಲಿಸಿ, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಆಯ್ಕೆ ಪ್ರಕ್ರಿಯೆ ರೂಪಿಸಬೇಕು ಎಂಬ ಬೇಡಿಕೆಯನ್ನೂ ಅವರು ಮುಂದಿಟ್ಟರು.

ಅರ್ಜಿ ನಮೂನೆ–7ರ ಮೂಲಕ ಆಕ್ಷೇಪ ಸಲ್ಲಿಸಿದವರ ಹಿನ್ನೆಲೆ ಮತ್ತು ಆಕ್ಷೇಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಮತದಾರರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ನಡೆದುಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button