ಜೇವರ್ಗಿಯಲ್ಲಿ ಅ.5ರಂದು ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ
ಮುಸ್ಲಿಂ ಮತದಾರರ ಓಲೈಕೆಗೆ ಉರ್ದು ಹಬ್ಬ: ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಆಕ್ರೋಶ

ಕಲಬುರಗಿ, ಅ.2- ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಅ.5ರಂದು ಸಂಜೆ 4 ಗಂಟೆಗೆ 17ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ನಡೆಯಲಿದ್ದು, ರಾತ್ರಿ 7 ಗಂಟೆಗೆ ಬೃಹತ್ ಹಿಂದೂ ಸಮಾವೇಶ ಆಯೋಜಿಸಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವ ಸಾಗರ ರಾಠೋಡ್ ಉದ್ಘಾಟಕರಾಗಿ, ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೊಸದುರ್ಗ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ವಿಧಾನಸಭೆಯ ಮೆಟ್ಟಿಲುಗಳ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಉರ್ದು ಹಬ್ಬ ಆಯೋಜಿಸಿರುವುದನ್ನು ಖಂಡಿಸಿ ಶೋಭಾಯಾತ್ರೆ ನಡೆಯಲಿದೆ ಎಂದು ಹೇಳಿದರು. ವಿಧಾನಸಭೆಯ ಮೆಟ್ಟಿಲುಗಳು ಕನ್ನಡಿಗರ ಅಭಿವೃದ್ಧಿಗಾಗಿ ಇರುವುದೇ ಹೊರತು, ಕನ್ನಡೇತರ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉರ್ದು ಎರಡನೇ ಭಾಷೆಯಾಗಿರುವ ಹಿನ್ನೆಲೆಯಲ್ಲಿ ಉರ್ದು ಹಬ್ಬ ಆಯೋಜಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಹಿಂದಿ ಭಾಷೆಯ ಬಳಕೆಗೆ ವಿರೋಧ ವ್ಯಕ್ತಪಡಿಸುವ ಸಚಿವರು ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ. ರಾಜ್ಯದ ಮಾತೃಭಾಷೆ ಕನ್ನಡವಾಗಿದ್ದರೂ ಮುಸ್ಲಿಂ ಸಮುದಾಯಕ್ಕೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಆಸಕ್ತಿ ತೋರುತ್ತಿಲ್ಲ ಎಂದು ಟೀಕಿಸಿದರು.
ಮುಸ್ಲಿಂ ಸಮುದಾಯದ ಮೂಲಭೂತ ಸೌಲಭ್ಯಗಳ ಕುರಿತು ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಕೇವಲ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ಮುಸ್ಲಿಂ ಸಮುದಾಯವನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ತಮ್ಮ ಆರೋಪವಾಗಿದೆ ಎಂದು ಹೇಳಿದರು.
ಕಳೆದ 2017ರಲ್ಲಿ ನೂತನ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಕನ್ನಡ ಭಾಷೆಗಿಂತ ದೊಡ್ಡದಾಗಿ ಉರ್ದು ಭಾಷೆಯ ಫಲಕ ಅಳವಡಿಸಲಾಗಿತ್ತು. ಈ ಕುರಿತು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದರೂ ಮತ್ತೆ ಉರ್ದು ಫಲಕ ಅಳವಡಿಸಲಾಗಿತ್ತು. ಮಹಾನಗರ ಪಾಲಿಕೆ ಸಭೆಯ ನಡಾವಳಿಯ ಪ್ರಕಾರ ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಫಲಕ ಇರಬಾರದು ಎಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ನೂತನ ಮಾರುಕಟ್ಟೆ ಕಟ್ಟಡದ ಮೇಲೂ ದೊಡ್ಡದಾಗಿ ಉರ್ದು ಫಲಕ ಅಳವಡಿಸಲಾಗಿದೆ. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆ ನಾಮಫಲಕ ತೆರವುಗೊಳಿಸಲಾಗಿದ್ದರೂ ಇದುವರೆಗೆ ಕನ್ನಡ ನಾಮಫಲಕ ಅಳವಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಸಣ್ಣ ನೀರಾವರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯಸಿಂಗ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಜೇವರ್ಗಿ ತಾಲ್ಲೂಕಿನ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿದ ಅವರು, ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಕನಿಷ್ಠ ಐದು ಎಕರೆವರೆಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದರು.
ಅಕ್ರಮ ಅಕ್ಕಿ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದನ್ನು ಸ್ವಾಗತಿಸಿದ ಅವರು, ಅಕ್ರಮ ಸಾಗಾಣಿಕೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ರಾಕೇಶ್ ಜಮಾದಾರ, ಮಲ್ಲಣ್ಣ ಎಸ್. ಹಿರೇಪೂಜಾರಿ, ಭಗವಂತರಾಯ ಗಾಣಗೇರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



