ಜಿಲ್ಲಾಸುದ್ದಿ

ನರಿಬೋಳ–ಚಾಮನೂರು ಸೇತುವೆಗೆ ಅ.5ರೊಳಗೆ ಟೆಂಡರ್ ಕರೆಯದಿದ್ದರೆ ಅಹೋರಾತ್ರಿ ಧರಣಿ

ಕಲಬುರಗಿ, ಅ.2- ಜಿಲ್ಲೆಯ ನರಿಬೋಳ–ಚಾಮನೂರು ಸೇತುವೆ ಕಾಮಗಾರಿಗೆ ಅ.5ರೊಳಗೆ ಟೆಂಡರ್ ಕರೆಯದಿದ್ದರೆ ಲೋಕೋಪಯೋಗಿ ಇಲಾಖೆಯ ಭವನದ ಎದುರು ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಆರಂಭಗೊಂಡ ಕಾಮಗಾರಿಯನ್ನು ಒಪ್ಪಂದದ ಪ್ರಕಾರ ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಬೇಕಿತ್ತು. ಆದರೆ ಹಲವು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರ ಕ್ಷೇತ್ರಕ್ಕೆ ಒಳಪಡುವ ಸೇತುವೆಯ ಸ್ಥಿತಿ ಹೀಗಿದ್ದರೆ ಉಳಿದ ಅಭಿವೃದ್ಧಿ ಕಾಮಗಾರಿಗಳ ಪರಿಸ್ಥಿತಿ ಹೇಗಿರಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಕೆಎಂವಿ ಕಂಪನಿ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಲ್ಲದೆ, ಬಜೆಟ್‌ನ ಬಹುಪಾಲು ಹಣ ಪಡೆದುಕೊಂಡು ಹೋಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನರಿಬೋಳ–ಚಾಮನೂರು ನದಿಯಲ್ಲಿ ದೋಣಿ ಸಂಚಾರದಿಂದ ಪ್ರತಿದಿನ ಕನಿಷ್ಠ ಹತ್ತು ಸಾವಿರ ರೂ. ಆದಾಯ ಬರುತ್ತಿದೆ. ಅಮಾವಾಸ್ಯೆ, ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಸಂಗ್ರಹವಾಗುತ್ತದೆ. ಆದರೆ ಈ ಆದಾಯದ ಒಂದು ಭಾಗ ಲೋಕೋಪಯೋಗಿ ಹಾಗೂ ಇತರ ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ ಎಂಬ ಆರೋಪಗಳಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಚಾಮನೂರು ಗ್ರಾಮದ ರೈತರೆಲ್ಲರೂ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಜಮೀನನ್ನು ನೇರವಾಗಿ ಮಾರಾಟ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಿ ಒಂದು ವರ್ಷ ಕಳೆದಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಅಗತ್ಯ ಕ್ರಮ ಕೈಗೊಳ್ಳದ ಲೋಕೋಪಯೋಗಿ ಇಲಾಖೆಯ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಕೂಡಲೇ ಟೆಂಡರ್ ಕರೆದು ಸೇತುವೆ ಕಾಮಗಾರಿ ಆರಂಭಿಸಬೇಕು. ನಿರ್ಲಕ್ಷ್ಯ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ರಾಕೇಶ್ ಜಮಾದಾರ, ಮಲ್ಲಣ್ಣ ಎಸ್. ಹಿರೇಪೂಜಾರಿ, ಭಗವಂತರಾಯ ಗಾಣಗೇರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button