ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಭದ್ರತೆ ಕಡ್ಡಾಯ: ಜಿಲ್ಲಾಧಿಕಾರಿ

ಕಲಬುರಗಿ, ಸೆ. 30: ಸಫಾಯಿ ಕರ್ಮಚಾರಿಗಳು ಹಾಗೂ ನೈರ್ಮಲ್ಯ ಸಿಬ್ಬಂದಿಯ ಆರೋಗ್ಯ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಸಿಬ್ಬಂದಿಗೂ ವಾರದೊಳಗೆ ಮಾಸ್ಟರ್ ಹೆಲ್ತ್ ಚೆಕಪ್ ಪೂರ್ಣಗೊಳಿಸಲು ವೇಳಾಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳು, ವಾಹನ ಚಾಲಕರು ಹಾಗೂ ಇತರ ಕಾರ್ಮಿಕರ ಆರೋಗ್ಯ ಭದ್ರತೆ ಮತ್ತು ವಿಮೆ ಕುರಿತು ಚರ್ಚಿಸಿದ ಅವರು, ಖಾಸಗಿ ವಿಮೆ ಹಾಗೂ ಇಎಸ್‌ಐ ಸೌಲಭ್ಯಗಳನ್ನು ಪರಿಶೀಲಿಸಿ ಸಿಬ್ಬಂದಿಗೆ ಗರಿಷ್ಠ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಮಿಕ ಇಲಾಖೆಯ ನಿಯಮದಂತೆ ನೌಕರರಿಗೆ ಪಿಎಫ್, ಇಎಸ್‌ಐ ಹಾಗೂ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ನೈರ್ಮಲ್ಯ ಸಿಬ್ಬಂದಿಗೆ ಗ್ಲೌಸ್, ಮಾಸ್ಕ್, ನೈಟ್ ಜಾಕೆಟ್ ಮತ್ತು ರೈನ್‌ಕೋಟ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ತಕ್ಷಣ ವಿತರಿಸಿ, ಅವುಗಳ ಸರಿಯಾದ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಟ್ಟಿಂಗ್ ಹಾಗೂ ಸಕ್ಕಿಂಗ್ ಯಂತ್ರೋಪಕರಣಗಳ ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕಡತಗಳನ್ನು ಸರಿಪಡಿಸಿ 48 ಗಂಟೆಗಳೊಳಗೆ ವರದಿ ಸಲ್ಲಿಸುವಂತೆ ಗಡುವು ನೀಡಿದರು. ಸಭೆಗೆ ಪೂರ್ವಸಿದ್ಧತೆಯಿಲ್ಲದೆ ಬಂದು ಅಸ್ಪಷ್ಟ ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆಡಳಿತದಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಆಳಂದ ಹಾಗೂ ಅಫಜಲಪುರ ತಾಲ್ಲೂಕುಗಳಲ್ಲಿ ₹50ರಿಂದ ₹70 ಲಕ್ಷ ವೆಚ್ಚದಲ್ಲಿ ಲೇಔಟ್ ಅಭಿವೃದ್ಧಿಪಡಿಸಿ, ಮೂರು ತಿಂಗಳೊಳಗೆ ನಿವೇಶನ ರಹಿತ ಸಫಾಯಿ ಕರ್ಮಚಾರಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಹಾಬಾದ್ ವ್ಯಾಪ್ತಿಯಲ್ಲಿ ಮನೆ ಇಲ್ಲದ 30ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಲಂ ಬೋರ್ಡ್ ಯೋಜನೆಯಡಿ ವಸತಿ ಕಲ್ಪಿಸಬೇಕು. ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆ ಒಪ್ಪಂದದ ಅವಧಿ ಮುಗಿಯುವ ಮುನ್ನವೇ ಪಾರದರ್ಶಕವಾಗಿ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಅನಗತ್ಯ ಕಾಮಗಾರಿಗಳಿಗೆ ಬಳಸದೆ ನೌಕರರ ವಸತಿ ಹಾಗೂ ಮೂಲಭೂತ ಅಗತ್ಯಗಳಿಗೆ ಬಳಸಬೇಕು. ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಧುಮತಿ, ಯೋಜನಾ ನಿರ್ದೇಶಕ ಜಗದೇವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಬೇಬಿಮುಗೇರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಸೌಲಭ್ಯ ವಿಳಂಬವಾಗದಿರಲಿ
ಕಲಬುರಗಿ, ಸೆ. 30: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರೆಯಬೇಕಾದ ಸೌಲಭ್ಯಗಳು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಇಲಾಖೆಗಳ ಕ್ರಿಯಾ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಜಿಲ್ಲಾ ಮಟ್ಟದ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಗದಿತ ಅವಧಿಯಲ್ಲಿ ಅನುದಾನ ಬಳಕೆಯಾಗದೆ ಮುಂದಿನ ತ್ರೈಮಾಸಿಕಕ್ಕೆ ಬಾಕಿ ಉಳಿಯದಂತೆ ಎಚ್ಚರಿಕೆ ವಹಿಸಬೇಕು. ವಿವಿಧ ಸರ್ಕಾರಿ ಯೋಜನೆಗಳಡಿ ನಿಗದಿಪಡಿಸಿದ ಗುರಿಯನ್ನು ಶೇ 100ರಷ್ಟು ಸಾಧಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಭಿವೃದ್ಧಿ ಯೋಜನೆಯಡಿ ಜಿಲ್ಲಾ ಹಾಗೂ ರಾಜ್ಯ ವಲಯಕ್ಕೆ ಒಟ್ಟು ₹9,794.41 ಲಕ್ಷ ಅನುದಾನ ಹಂಚಿಕೆಯಾಗಿದೆ. ರಾಜ್ಯ ವಲಯಕ್ಕೆ ₹8,051.17 ಲಕ್ಷ ಹಾಗೂ ಜಿಲ್ಲಾ ವಲಯಕ್ಕೆ ₹1,743.24 ಲಕ್ಷ ಹಂಚಿಕೆಯಾಗಿದೆ. ಬಿಡುಗಡೆಯಾದ ₹11,922.13 ಲಕ್ಷದಲ್ಲಿ ₹10,709.43 ಲಕ್ಷ ಬಳಕೆಯಾಗಿರುವ ಕುರಿತು ಸಭೆಯಲ್ಲಿ ಪರಿಶೀಲಿಸಲಾಯಿತು.
ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಕ್ರಿಯಾ ಯೋಜನೆಗಳಿಗೆ ಅಗತ್ಯ ಅನುಮೋದನೆ ಪಡೆದಿರುವುದನ್ನು ಖಚಿತಪಡಿಸಿಕೊಂಡು, ನಿಗದಿತ ಅವಧಿಯೊಳಗೆ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದು ಸೂಚಿಸಿದರು.
ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ಫಲಾನುಭವಿಗಳ ಆಯ್ಕೆ ಮತ್ತು ಅನುದಾನ ಬಳಕೆಯ ಪ್ರಗತಿಯನ್ನು ಪರಿಶೀಲಿಸಿದ ಅವರು, ಮುಂದಿನ ಸಭೆಯೊಳಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಬೇಕು ಎಂದರು.
ಗ್ರಾಮೀಣ ಕೈಗಾರಿಕೆ, ಸಣ್ಣ ನೀರಾವರಿ, ವೈದ್ಯಕೀಯ ಶಿಕ್ಷಣ, ಶಾಲಾ ಅನುದಾನ, ವಾಹನ ಸೌಲಭ್ಯ, ವಿದ್ಯಾ ವಿಕಾಸ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯ ಪ್ರಗತಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅನುಮೋದಿತ ಯೋಜನೆಗಳು ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ, ಬ್ಯಾಂಕ್‌ಗಳ ಮೂಲಕ ಅನುದಾನ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವಂತೆ ಸೂಚಿಸಲಾಯಿತು.
ಇಲಾಖೆಗಳ ನಡುವೆ ಸಮನ್ವಯದ ಕೊರತೆಯನ್ನು ಸಹಿಸುವುದಿಲ್ಲ. ಪ್ರತಿಯೊಂದು ಇಲಾಖೆಯ ಪ್ರಗತಿಯೂ ಮತ್ತೊಂದು ಇಲಾಖೆಗೆ ಪೂರಕವಾಗಿರಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್, ಡಿಯುಡಿಸಿ ಜಿಲ್ಲಾ ಯೋಜನಾ ನಿರ್ದೇಶಕ ಮುನ್ನಾವರ್ ದೌಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಧುಮತಿ, ಯೋಜನಾ ನಿರ್ದೇಶಕ ಜಗದೇವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಬೇಬಿಮುಗೇರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.



