ಎಸ್‌ಐಆರ್ ನಿಲ್ಲಿಸಿ, ನಮೂನೆ ೭ ದುರುಪಯೋಗದ ಕುರಿತು ತನಿಖೆ ನಡೆಸಿ: ಎಸ್‌ಯುಸಿಐ(ಸಿ)

ಕಲಬುರಗಿ, ಅ.೫– ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ನಮೂನೆ ೭ರ ದುರುಪಯೋಗದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ ಆಗ್ರಹಿಸಿದರು.
ವೈಜ್ಞಾನಿಕ ಹಾಗೂ ಪ್ರಜಾಸತ್ತಾತ್ಮಕ ನಿಯಮಗಳನ್ನು ಕಡೆಗಣಿಸಿ ಮತದಾರರ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಅನರ್ಹ ಹಾಗೂ ಸಂಶಯಾಸ್ಪದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಅವಕಾಶ ಕಲ್ಪಿಸುವ ನಮೂನೆ ೭ರ ಮೂಲಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅರ್ಹ ಮತದಾರರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಅದರಲ್ಲೂ ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯಗಳ ಮತದಾರರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿದರು.
ಮತದಾರರ ಮುದ್ರಿತ ವಿವರಗಳನ್ನು ಒಳಗೊಂಡ ನಮೂನೆ ೭ ಅನ್ನು ಸಾವಿರಾರು ಸಂಖ್ಯೆಯಲ್ಲಿ, ಸಂಬಂಧಿಸಿದ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡದೆ ಬಿಜೆಪಿ ಸಲ್ಲಿಸಿದೆ ಎಂಬುದಾಗಿ ಸಾಕ್ಷ್ಯಾಧಾರಗಳೊಂದಿಗೆ ಪತ್ರಿಕೆಗಳು ವರದಿ ಮಾಡಿವೆ ಎಂದು ವೀರಭದ್ರಪ್ಪ ತಿಳಿಸಿದರು.
ಬಿಜೆಪಿ ಹಾಗೂ ಚುನಾವಣಾ ಆಯೋಗ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಕ್ಕೆ ಈ ಬೆಳವಣಿಗೆಗಳು ಪುಷ್ಟಿ ನೀಡುವಂತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೆ, ಸಲ್ಲಿಕೆಯಾಗಿರುವ ನಮೂನೆ ೭ರ ಕುರಿತು ಸಮಗ್ರ ತನಿಖೆ ನಡೆಸಿ, ಅಕ್ರಮ ಅಥವಾ ದುರುಪಯೋಗದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.



