ಜಿಲ್ಲಾಸುದ್ದಿ

ಕನ್ನಡ ಭಾಷೆಯ ಪೋಷಣೆ, ಉಳಿವಿಗಾಗಿ ಕೆಲಸ ಮಾಡಿ: ಕುಲಪತಿ ಪ್ರೊ. ಶಶಿಕಾಂತ ಉಟಕೇರಿ

ಕಲಬುರಗಿ, ಸೆ.30: ಕನ್ನಡ ಭಾಷೆಯ ಪೋಷಣೆ ಹಾಗೂ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಟಕೇರಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಅಧ್ಯಾಪಕರ ಸಂಘ ಸ್ಥಾಪನೆಯಾಗಿರುವುದು ಸಂತಸದ ಸಂಗತಿ ಎಂದರು.

ಸಂಘಗಳು ಆರ್ಥಿಕವಾಗಿ ಸದೃಢವಾಗಬೇಕಾದರೆ ಅಧ್ಯಾಪಕರು ಸಂಘಕ್ಕೆ ದೇಣಿಗೆ ಹಾಗೂ ವಂತಿಗೆ ನೀಡಬೇಕು. ಸಂಘದ ಮೂಲಕ ಅಧ್ಯಾಪಕರ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿವಿಧ ಬಗೆಯ ಪುಸ್ತಕಗಳ ಪ್ರಕಟಣೆಗೂ ಸಂಘ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಿ, ಕನ್ನಡ ಅಧ್ಯಯನ ಸಂಸ್ಥೆ ಪವಿತ್ರವಾದ ಸ್ಥಳವಾಗಿದೆ. ಅನೇಕ ಸಂಘಗಳು ಬೇಗ ಹುಟ್ಟಿ ಅಷ್ಟೇ ಬೇಗ ಮರೆಯಾಗುತ್ತವೆ. ಆದರೆ ಕನ್ನಡ ಅಧ್ಯಾಪಕರ ಸಂಘ ಗಟ್ಟಿಯಾಗಿ ಬೆಳೆದು ಉತ್ತಮ ಕಾರ್ಯನಿರ್ವಹಿಸಬೇಕು ಎಂದರು.

ಅಧ್ಯಯನದ ಆಸಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಅಧ್ಯಾಪಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಅಧ್ಯಯನ ಮಾಡಿಸುತ್ತಿಲ್ಲ. ಅವಕಾಶಗಳು ಹೆಚ್ಚಾಗುತ್ತಿದ್ದರೂ ಗುಣಮಟ್ಟ ಕುಸಿಯುತ್ತಿರುವುದು ದುರಂತದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಕನ್ನಡದ ಉಳಿವಿಗಾಗಿ ಕನ್ನಡ ಅಧ್ಯಾಪಕರು ಸಂಘಟಿತರಾಗಬೇಕು. ಅಧ್ಯಾಪಕರಲ್ಲಿ ಪರಸ್ಪರ ಸಹಕಾರ, ಸಹೃದಯತೆ, ಗೌರವ, ಪ್ರೀತಿ ಹಾಗೂ ವಿಶ್ವಾಸ ಇರಬೇಕು ಎಂದರು.

ಅಧ್ಯಾಪಕರು ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ಕನಸು ಕಟ್ಟಿಕೊಂಡು ಅದನ್ನು ನನಸಾಗಿಸುವತ್ತ ಪ್ರಯತ್ನಿಸಬೇಕು. ಕನ್ನಡ ಕಟ್ಟುವ ಹಾಗೂ ಸಂಘ ಕಟ್ಟುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಚಿಕ್ಕಳ ಮಠಪತಿ, ಡಾ. ಅನ್ನಪೂರ್ಣಾ ಪಾಟೀಲ, ಡಾ. ಶ್ರೀಶೈಲ ನಾಗರಾಳ, ಡಾ. ಸುರೇಂದ್ರ ಕೆರಮಗಿ, ಡಾ. ಅಮೃತಾ ಕಟಕೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗೆ ಭಾಜನರಾದ ಡಾ. ಸೂರ್ಯಕಾಂತ ಸುಜಾತ್ ಅವರನ್ನು ಸನ್ಮಾನಿಸಲಾಯಿತು.

ಡಾ. ಮಲ್ಲಿನಾಥ ತಳವಾರ, ಡಾ. ಮಿರಾಜ್ ಪಾಷಾ, ಡಾ. ಸಂಗಣ್ಣ ಸಿಂಗೇ, ಡಾ. ದತ್ತಾತ್ರೇಯ ಅವರಿಗೆ ಹೊಸದಾಗಿ ಪ್ರಕಟಿಸಿದ ಪುಸ್ತಕಗಳಿಗಾಗಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಅಧ್ಯಾಪಕರ ಸಂಘದ ಪದಾಧಿಕಾರಿಗಳ ಪದಗ್ರಹಣವೂ ನಡೆಯಿತು.

ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಡಾ. ಪಂಡಿತ್ ಬಿ.ಕೆ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ. ಸೂರ್ಯಕಾಂತ ಅತನೂರ ಅಧ್ಯಾಪಕರ ಸಂಘದ ಬೇಡಿಕೆಗಳ ಪಟ್ಟಿಯನ್ನು ಓದಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಿಗೆ ಸಲ್ಲಿಸಿದರು.

ಬಸವರಾಜ ಶೃಂಗೇರಿ ಪ್ರಾರ್ಥಿಸಿದರು. ಡಾ. ಕಪಿಲ್ ಚಕ್ರವರ್ತಿ ನಿರೂಪಿಸಿದರು. ಡಾ. ಶಿವಶರಣಪ್ಪ ಮೊತಕಪಳ್ಳಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಪ್ರತಿನಿಧಿ ಸುವರ್ಣ ವಜ್ಜೆ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಡಾ. ಜಗಪ್ಪ ತಳವಾರ, ಡಾ. ಮಲ್ಲಪ್ಪ ಮಾನೇಗಾರ, ಡಾ. ರೇವಣಸಿದ್ಧ ನಿಂಗನಾಯಕ, ಡಾ. ರವೀಂದ್ರ ಕುಂಬಾರ, ಡಾ. ದಯಾನಂದ ಕಾಂಬಳೆ, ಡಾ. ಗುಲಾಮ್ ಮಹೆಬೂಬ್, ಡಾ. ಸಂಗೀತಾ ಹಿರೇಮಠ, ಡಾ. ಮರೆಪ್ಪ ಮೇತ್ರೆ, ಮಾರುತಿ ಮಾಪರ್ಳ್ಳಿ, ಡಾ. ರುಕ್ಮಿಣಿ, ಭೀಮಣ್ಣ ಬೆಡಕಪಳ್ಳಿ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button