ಆರೋಗ್ಯ

‘ಒನ್ ಹೆಲ್ತ್’ ಪರಿಕಲ್ಪನೆಯೊಂದಿಗೆ ರೇಬಿಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

ಮಾನವ, ಪ್ರಾಣಿ ಹಾಗೂ ಪರಿಸರದ ಆರೋಗ್ಯ ಪರಸ್ಪರ ಅವಿನಾಭಾವ: ರಾಹುಲ್ ಸಂಕನೂರ

ಕಲಬುರಗಿ, ಸೆ. 28: ಮಾನವನ ಆರೋಗ್ಯ, ಪ್ರಾಣಿ-ಪಕ್ಷಿಗಳ ಆರೋಗ್ಯ ಹಾಗೂ ಪರಿಸರದ ಆರೋಗ್ಯ ಪರಸ್ಪರ ಅವಿನಾಭಾವವಾಗಿ ಬೆಸೆದುಕೊಂಡಿದ್ದು, ‘ಒನ್ ಹೆಲ್ತ್’ ಪರಿಕಲ್ಪನೆಯಡಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸುವ ಮೂಲಕ ರೇಬಿಸ್ ಮುಕ್ತ ಸಮಾಜ ನಿರ್ಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್. ಸಂಕನೂರ ಹೇಳಿದರು.

ನಗರದ ಹೊಸ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘದ ಕಲಬುರಗಿ ಘಟಕದ ಸಂಯುಕ್ತಾಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ-2026ರ ಅಂಗವಾಗಿ ಜಿಲ್ಲೆಯ ಪಶುವೈದ್ಯರಿಗೆ ಆಯೋಜಿಸಿದ್ದ ಒಂದು ದಿನದ ತಾಂತ್ರಿಕ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವರು, ಪ್ರಾಣಿ-ಪಕ್ಷಿಗಳು ಹಾಗೂ ಪರಿಸರದ ಆರೋಗ್ಯ ಒಂದಕ್ಕೊಂದು ಸಂಬಂಧ ಹೊಂದಿವೆ. ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಏರುಪೇರಾದರೆ ಪ್ರಕೃತಿಯ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಪ್ರಕೃತಿ ಹಾಗೂ ಪ್ರಾಣಿಗಳು ಆರೋಗ್ಯವಾಗಿದ್ದಾಗ ಮಾತ್ರ ಮಾನವ ಸಮಾಜ ಸುರಕ್ಷಿತವಾಗಿರಲು ಸಾಧ್ಯ ಎಂದರು.

ರೇಬಿಸ್ ಲಸಿಕೆಯನ್ನು ಮೊದಲ ಬಾರಿಗೆ ಸಂಶೋಧಿಸಿದ ಪ್ರಸಿದ್ಧ ವಿಜ್ಞಾನಿ ಲೂಯಿ ಪಾಶ್ಚರ್ ಅವರ ಸ್ಮರಣಾರ್ಥ ರೇಬಿಸ್ ತಡೆಗಟ್ಟುವಿಕೆ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ರೇಬಿಸ್ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಾಯಿ, ಬೆಕ್ಕು ಸೇರಿದಂತೆ ಸೋಂಕಿತ ಪ್ರಾಣಿಗಳ ಕಚ್ಚುವಿಕೆ ಅಥವಾ ಉಗುರುಗಳಿಂದ ಉಂಟಾಗುವ ಗಾಯದ ಮೂಲಕ ರೇಬಿಸ್ ಹರಡುವ ಸಾಧ್ಯತೆಯಿದೆ. ರೇಬಿಸ್ ಶೇ.100ರಷ್ಟು ಮಾರಕವಾಗಿದ್ದರೂ, ಶೇ.100ರಷ್ಟು ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಪ್ರಾಣಿಗಳಿಂದ ಕಚ್ಚಿಸಿಕೊಂಡ ಕೂಡಲೇ ಗಾಯವನ್ನು ಸ್ವಚ್ಛವಾಗಿ ತೊಳೆದು, ವೈದ್ಯರ ಸಲಹೆಯಂತೆ ಸಮಯಕ್ಕೆ ಸರಿಯಾಗಿ ರೇಬಿಸ್ ನಿರೋಧಕ ಲಸಿಕೆ ಪಡೆಯುವುದರಿಂದ ಜೀವ ಉಳಿಸಬಹುದು ಎಂದರು.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಲಸಿಕೆಗಳು ಲಭ್ಯವಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆಯೊಂದಿಗೆ ಸಹಕರಿಸಿ ರೇಬಿಸ್ ಮುಕ್ತ ವಾತಾವರಣ ನಿರ್ಮಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ರೇಬಿಸ್ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳ ಸಹಕಾರ ಅಗತ್ಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಸಂಜಯ ರೆಡ್ಡಿ ಮಾತನಾಡಿ, ಮಾನವರು ಇಲ್ಲದಿದ್ದರೂ ಪ್ರಾಣಿಗಳು ಬದುಕಬಲ್ಲವು. ಆದರೆ ಪ್ರಾಣಿಗಳಿಲ್ಲದೆ ಮಾನವ ಬದುಕು ಕಷ್ಟಸಾಧ್ಯ. ಹಾಲು, ಪೌಷ್ಟಿಕ ಆಹಾರ ಸೇರಿದಂತೆ ಹಲವು ಅಗತ್ಯಗಳಿಗಾಗಿ ನಾವು ಪ್ರಾಣಿಗಳ ಮೇಲೆ ಅವಲಂಬಿತರಾಗಿದ್ದೇವೆ ಎಂದರು.

ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ರೇಬಿಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಮಾಹಿತಿ ದಾಖಲಿಸುವ ಸಂದರ್ಭದಲ್ಲಿ ಆಂಥ್ರಾಕ್ಸ್, ಪಿಪಿಆರ್ ಸೇರಿದಂತೆ ಇತರೆ ಕಾಯಿಲೆಗಳಿಂದ ಸಂಭವಿಸಿದ ಸಾವುಗಳನ್ನು ತಪ್ಪಾಗಿ ರೇಬಿಸ್ ಪ್ರಕರಣಗಳಾಗಿ ದಾಖಲಿಸದಂತೆ ತಾಲೂಕು ಮಟ್ಟದ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಸಂಯೋಜಕರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಲಬುರಗಿಯಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಚಿಕಿತ್ಸೆಗಾಗಿ ದೊಡ್ಡ ಪ್ರಮಾಣದ ಕೇಂದ್ರವನ್ನು ಆರಂಭಿಸುವ ಕಾರ್ಯ ನಡೆಯುತ್ತಿದೆ. ಪಶುವೈದ್ಯರ ಕೊರತೆ ನೀಗಿಸಲು ವೇತನ ಆಧಾರಿತ ಸೇವಾ ಮಾದರಿಯಲ್ಲಿ ವೈದ್ಯರ ಸೇವೆ ಪಡೆಯುವ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರೇಬಿಸ್ ಮುಕ್ತ ವಾತಾವರಣಕ್ಕೆ ಇಲಾಖೆಗಳ ಸಮನ್ವಯ ಅಗತ್ಯ

ಕಲಬುರಗಿ ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ. ದಯಾನಂದ ಹಕ್ಕಪಿಕ್ಕಿ ಮಾತನಾಡಿ, ರೇಬಿಸ್ ಮುಕ್ತ ವಾತಾವರಣ ನಿರ್ಮಿಸಲು ಪಶುಸಂಗೋಪನೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಬೆಂಗಳೂರಿನ ‘ಚಾರ್ಲಿ’ ಸಂಸ್ಥೆಯು ಪ್ರತಿದಿನ ಸುಮಾರು 20ರಿಂದ 30 ಶ್ವಾನಗಳಿಗೆ ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮ ಹಾಗೂ ಲಸಿಕಾ ಅಭಿಯಾನ ನಡೆಸುತ್ತಿರುವುದನ್ನು ಶ್ಲಾಘಿಸಿದರು.

ಪ್ರತಿಯೊಂದು ಪ್ರದೇಶದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರೇಬಿಸ್ ತಡೆಗಟ್ಟುವಿಕೆ ಅತ್ಯಂತ ಮಹತ್ವದ್ದಾಗಿದೆ. ರೈತರ ತರಬೇತಿ ಶಿಬಿರಗಳಲ್ಲಿ ರೇಬಿಸ್ ಜಾಗೃತಿ ಹಾಗೂ ಸಾವಯವ ಕೃಷಿ ಕುರಿತು ನಿರಂತರವಾಗಿ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ ಎಂದರು.

2030ರ ವೇಳೆಗೆ ರೇಬಿಸ್ ಮುಕ್ತ ಸಮಾಜದ ಗುರಿ

ಕರ್ನಾಟಕ ಪಶುವೈದ್ಯಕೀಯ ಸಂಘದ ಕಲಬುರಗಿ ಘಟಕದ ಅಧ್ಯಕ್ಷ ಡಾ. ಯಲ್ಲಪ್ಪ ಇಂಗಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದರೂ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಕಳೆದ 15 ದಿನಗಳಿಂದ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳು ಹಾಗೂ ಚಿತ್ತಾಪುರ, ಚಿಂಚೋಳಿ, ಸೇಡಂ, ಆಳಂದ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಲ್ಲಿ ಸುಮಾರು 480ಕ್ಕೂ ಹೆಚ್ಚು ರೇಬಿಸ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 2030ರ ವೇಳೆಗೆ ರೇಬಿಸ್ ಮುಕ್ತ ಸಮಾಜ ನಿರ್ಮಿಸುವ ಗುರಿಯೊಂದಿಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಲಬುರಗಿ ಇಎಸ್‌ಐಸಿ ಸಹ ಪ್ರಾಧ್ಯಾಪಕ ಡಾ. ಮಾವತ್ಕರ್ ಮುನ್ನಾಜೀ ವೆಂಕಟೇಶ ಹಾಗೂ ಬೀದರ್ ಕೆವಿಎಎಫ್‌ಎಸ್‌ಯು ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಸಂಜೀವ ಕುಮಾರ ಟೋಪನ್ ಅವರು ರೇಬಿಸ್ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ರೇಬಿಸ್ ಜಾಗೃತಿ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಸಂಗನಗೌಡ ಹೊಸಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಕ್ಯಾತನಾಳ, ಕಲಬುರಗಿ ಸ್ಪೆಷಾಲಿಟಿ ಆಸ್ಪತ್ರೆಯ ಉಪ ನಿರ್ದೇಶಕ ಡಾ. ರಾಜು ದೇಶಮುಖ, ಕಲಬುರಗಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಡಾ. ರವೀಂದ್ರ ಬುರೆ ಸೇರಿದಂತೆ ಜಿಲ್ಲೆಯ ಪಶುವೈದ್ಯಾಧಿಕಾರಿಗಳು ಹಾಗೂ ನಿವೃತ್ತ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಡಾ. ಶಂಕರ ಎಸ್. ಕಣ್ಣಿ ಸ್ವಾಗತಿಸಿದರು. ಡಾ. ವಿಜಯಕುಮಾರ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button