ಶಿಕ್ಷಣಸಮಾಜ

ದೇಸಾಯಿ ಕಾಲೇಜಿನ ಸ್ವಾಗತ ಸಮಾರಂಭದಲ್ಲಿ ನೇತ್ರದಾನ ಶಿಬಿರ

ಅಲ್ಪಾವಧಿಯಲ್ಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೇಸಾಯಿ ಕಾಲೇಜಿನಿಂದ ಕ್ರಾಂತಿಕಾರಿ ಸಾಧನೆ: ಬಸವರಾಜ ಅ. ಚಿನಿವಾರ್

ಕಲಬುರಗಿ, ಸೆ. 28: ಕಲ್ಯಾಣ ಕರ್ನಾಟಕ, ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿಯೇ ಎಂ.ಎನ್. ದೇಸಾಯಿ ಪದವಿ ಕಾಲೇಜು ಮಹತ್ವದ ಸಾಧನೆ ಮಾಡಿದೆ ಎಂದು ಹಿರಿಯ ಪತ್ರಕರ್ತ ಬಸವರಾಜ ಅ. ಚಿನಿವಾರ್ ಶ್ಲಾಘಿಸಿದರು.

ನಗರದ ಹೊಸ ಜೇವರ್ಗಿ ರಸ್ತೆಯ ಕೊಠಾರಿ ಭವನದಲ್ಲಿ ಭಾನುವಾರ ನಡೆದ ಎಂ.ಎನ್. ದೇಸಾಯಿ ಪದವಿ ಕಾಲೇಜಿನ ಸ್ವಾಗತ ಸಮಾರಂಭ ಹಾಗೂ ನೇತ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ಕಾಲೇಜಿನಿಂದ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅಲ್ಪಾವಧಿಯಲ್ಲಿ ಕಾಲೇಜು ಉತ್ತಮ ಪ್ರಗತಿ ಸಾಧಿಸಿರುವುದು ಶ್ಲಾಘನೀಯ ಎಂದರು.

ಕಲ್ಯಾಣ ಕರ್ನಾಟಕ, ವಿಶೇಷವಾಗಿ ಕಲಬುರಗಿ ಜಿಲ್ಲೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನ ಹಾಗೂ ಭಾಲ್ಕಿ ಪಟ್ಟದ್ದೇವರ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಸ್ವಾತಂತ್ರ್ಯ ನಂತರ ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಕಂಡುಬಂದಿತು. ನಂತರ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ, ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಹಲವು ಉನ್ನತ ಶಿಕ್ಷಣ ಸಂಸ್ಥೆಗಳು ಈ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸಂದೀಪ್ ದೇಸಾಯಿ ಅವರು ತಮ್ಮ 25ನೇ ವಯಸ್ಸಿನಲ್ಲಿಯೇ ಈ ಭಾಗದ ಯುವಕರಿಗೆ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಒದಗಿಸುವ ಉದ್ದೇಶದಿಂದ ಕೇಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ಎಂ.ಎನ್. ದೇಸಾಯಿ ಕಾಲೇಜು ಆರಂಭಿಸಿದರು. ಬಳಿಕ ಕಾಲೇಜನ್ನು ರಾಷ್ಟ್ರಪತಿ ವೃತ್ತದ ಸಮೀಪದ ಹೊಸ ಜೇವರ್ಗಿ ರಸ್ತೆಗೆ ಸ್ಥಳಾಂತರಿಸಲಾಯಿತು. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಬಹುದಾದ ಸ್ಥಳದಲ್ಲಿ ಕಾಲೇಜು ನಿರ್ಮಿಸಿರುವುದು ಗಮನಾರ್ಹ ಎಂದರು.

ಕಾಲೇಜು ಸ್ಥಾಪಿಸಿ ಅಭಿವೃದ್ಧಿಪಡಿಸುವುದು ಸುಲಭದ ಕೆಲಸವಲ್ಲ. ಸಂದೀಪ್ ದೇಸಾಯಿ, ಅವರ ಸಹೋದರ ಸಂಬಂಧಿ ಚಂದ್ರಕಾಂತ್ ದೇಸಾಯಿ ಹಾಗೂ ಕಾರ್ಯದರ್ಶಿ ಜಗನ್ನಾಥ ನಾಗೂರ್ ಅವರ ಪರಿಶ್ರಮದಿಂದ ಸಂಸ್ಥೆ ಉತ್ತಮವಾಗಿ ಬೆಳೆದಿದೆ. ಮನೆ ಹಾಗೂ ಕಚೇರಿ ಜವಾಬ್ದಾರಿಗಳೊಂದಿಗೆ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಪಡಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ

ಎಂ.ಎನ್. ದೇಸಾಯಿ ಪದವಿ ಕಾಲೇಜು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಪಠ್ಯೇತರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಮತದಾರರ ಜಾಗೃತಿ, ಕೋವಿಡ್ ಜಾಗೃತಿ, ನೇತ್ರದಾನ, ರಕ್ತದಾನ ಹಾಗೂ ದೇಹದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಜನಪರ ಕಾರ್ಯಗಳಲ್ಲಿಯೂ ಕಾಲೇಜು ಮುಂಚೂಣಿಯಲ್ಲಿದೆ ಎಂದು ಬಸವರಾಜ ಅ. ಚಿನಿವಾರ್ ಹೇಳಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ಅಥವಾ ಸರ್ಕಾರ ಮಾಡಬೇಕಾದ ಹಲವು ಕಾರ್ಯಗಳನ್ನು ಸಂಸ್ಥೆಯ ಆಡಳಿತ ಮಂಡಳಿ ತನ್ನದೇ ಆದ ರೀತಿಯಲ್ಲಿ ಮಾಡುತ್ತಿದೆ. ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಪರಿಶ್ರಮದಿಂದ ಕಾಲೇಜು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು: ಅಡ್ಡೂರು ಶ್ರೀನಿವಾಸಲು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.

ಪಾಲಕರು ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂದು ಒತ್ತಡ ಹೇರುವುದನ್ನು ತಪ್ಪಿಸಬೇಕು. ಅತಿಯಾದ ಒತ್ತಡ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಕೇವಲ 12 ವರ್ಷಗಳಲ್ಲಿ ಸಂದೀಪ್ ದೇಸಾಯಿ, ಚಂದ್ರಕಾಂತ್ ದೇಸಾಯಿ ಹಾಗೂ ಜಗನ್ನಾಥ ನಾಗೂರ್ ಅವರ ಪರಿಶ್ರಮದಿಂದ ಎಂ.ಎನ್. ದೇಸಾಯಿ ಕಾಲೇಜು ಉತ್ತಮ ಸಾಧನೆ ಮಾಡಿದೆ. ಕಾಲೇಜು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಆರ್‌ಸಿಎಚ್ ಅಧಿಕಾರಿ ಡಾ. ಸಿದ್ದು ಪಾಟೀಲ್, ನ್ಯಾಯವಾದಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ರಾಘವೇಂದ್ರ ಕುಲಕರ್ಣಿ, ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಉನ್ನತೀಕರಣ ಸಂಘದ ರಾಜ್ಯ ನಿರ್ದೇಶಕಿ ಹಾಗೂ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಹು, ಸುರೇಶ್ ದೇಸಾಯಿ, ಜೆಸ್ಕಾಂ ಅಭಿಯಂತರರಾದ ಶ್ರೀಮತಿ ಸೇರಿದಂತೆ ಹಲವರು ಮಾತನಾಡಿ, ಕಾಲೇಜಿನ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ವೈಯಕ್ತಿಕ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂದೀಪ್ ಎಸ್. ದೇಸಾಯಿ, ಜಗನ್ನಾಥ ಎಸ್. ದೇಸಾಯಿ, ಗಣಪತಿ ಪೂಜಾರಿ, ಆರ್.ಪಿ. ಜಾಧವ್, ದತ್ತಾತ್ರೇಯ ಪಾಟೀಲ್, ಶಂಕರಗೌಡ ಪಾಟೀಲ್, ಸುರೇಶ್ ಎಸ್. ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಸೀಟು ಪಡೆದ ಕುಮಾರಿ ಕೀರ್ತಿ ರಾಜಶೇಖರ್ ಹೂನಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಪೇಂದ್ರ ಬರಗಾಲಿ, ಎಚ್.ಪಿ. ಮಧುಕರ್, ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಕೆ. ದೇವರಾಜ್ ಎಸ್., ಉದ್ಯಮಿ ಬಾಬುಗೌಡ ಎಸ್. ಬಿರಾದಾರ್, ನಿವೃತ್ತ ಮುಖ್ಯಗುರುಗಳಾದ ಜಟ್ಟೆಪ್ಪ ಎಂ. ಜಮಾದಾರ್, ಬಸವರಾಜ್ ಅತನೂರ್ ಹಾಗೂ ನಿವೃತ್ತ ಸಹ ಶಿಕ್ಷಕ ಬಾಬುರಾವ್ ಹಾಗರಗುಂಡಗಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

Leave a Reply

Your email address will not be published. Required fields are marked *

Back to top button