ರೈತರ ಹೆಸರಿನಲ್ಲಿ ರಾಜಕೀಯ ಹೋರಾಟ: ಆಳಂದ ಶಾಸಕ ಬಿ.ಆರ್. ಪಾಟೀಲ್ ವಿರುದ್ಧ ಗುತ್ತೇದಾರ್ ಆಕ್ರೋಶ

ರೈತರ ಸಮಸ್ಯೆ ಪರಿಹರಿಸುವ ಬದಲು ಪ್ರತಿಭಟನೆ ನಡೆಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಸರಿಯಲ್ಲ; ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಕೇಂದ್ರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹರ್ಷಾನಂದ್ ಎಸ್. ಗುತ್ತೇದಾರ್ ಟೀಕೆ
ಕಲಬುರಗಿ, ನ. 11: ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ವಿಡಿಯೋ ಮೂಲಕ ಜನರಿಗೆ ನೀಡುತ್ತಿರುವ ಸಂದೇಶವೇನು? ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಎಷ್ಟು ಒತ್ತಡ ಹೇರಿದ್ದಾರೆ? ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದೇ ತಮ್ಮ ಜವಾಬ್ದಾರಿ ಮುಗಿದಂತೆ ಅಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಎಸ್. ಗುತ್ತೇದಾರ್ ಅವರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರಕ್ಕೆ ಮೂರು ಪತ್ರಗಳನ್ನು ಬರೆದಿದ್ದರೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ಮುಂದಾಗಿರುವ ಶಾಸಕರ ಕ್ರಮವನ್ನು ಗುತ್ತೇದಾರ್ ಟೀಕಿಸಿದ್ದಾರೆ.
ಶಾಸಕರು ಪ್ರತಿಭಟನೆ ನಡೆಸುವುದಕ್ಕೆ ತಮ್ಮ ವಿರೋಧವಿಲ್ಲ. ರೈತರ ಪರವಾಗಿ ಧ್ವನಿ ಎತ್ತುವುದಕ್ಕೂ ಆಕ್ಷೇಪವಿಲ್ಲ. ಆದರೆ ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಆಳಂದದ ಜನತೆ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಮುಖ್ಯಮಂತ್ರಿಯೂ ತಮ್ಮದೇ ಪಕ್ಷದವರಾಗಿದ್ದಾರೆ. ಹೀಗಿದ್ದರೂ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದ ಮೇಲೆ ಎಷ್ಟು ಒತ್ತಡ ಹೇರಿದ್ದೀರಿ? ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳುವುದರಿಂದ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಿ ಪ್ರತಿಭಟನೆ ನಡೆಸುವುದರಿಂದ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗುವುದಿಲ್ಲ. ರೈತರಿಗೆ ನೈಜ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಳಂದದ ರೈತರು ರಾಜಕೀಯ ನಾಟಕಗಳನ್ನು ನೋಡುವಷ್ಟು ಅಸಹಾಯಕರಲ್ಲ. ಅವರಿಗೆ ಸತ್ಯಾಸತ್ಯತೆ ತಿಳಿದಿದೆ. ರೈತರ ಸಂಕಷ್ಟವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಪ್ರತಿಭಟನೆಗಿಂತ ರೈತರಿಗೆ ಪರಿಹಾರ ಒದಗಿಸುವುದು ಮುಖ್ಯ; ಪ್ರಚಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ಆದ್ಯತೆಯಾಗಬೇಕು ಎಂದು ಹರ್ಷಾನಂದ್ ಎಸ್. ಗುತ್ತೇದಾರ್ ಒತ್ತಾಯಿಸಿದ್ದಾರೆ.
