ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಜಂಗಮ ಅರ್ಚಕರು, ಪುರೋಹಿತರು ಭಾಗಿ

ಕಲಬುರಗಿ, ಸೆ.22: ನಗರದ ಕನ್ನೇರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸೆ.27ರಂದು ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಜಂಗಮ ಅರ್ಚಕರು ಹಾಗೂ ಪುರೋಹಿತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ವೀರಶೈವ ಜಂಗಮ ಅರ್ಚಕರು ಹಾಗೂ ಪುರೋಹಿತರ ಸಂಘದ ಜಿಲ್ಲಾಧ್ಯಕ್ಷ ವೇದಮೂರ್ತಿ ಶ್ರೀಶೈಲ ಶರಣಯ್ಯ ಮಠ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅವರ ನೇತೃತ್ವದಲ್ಲಿ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಎಲ್ಲ ಜಾತಿ, ಸಮುದಾಯಗಳ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾವೇಶವು ಜಾತಿ, ಜಾತಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾನತೆ, ಕಾಯಕ ಹಾಗೂ ದಾಸೋಹದಂತಹ ಬಸವಾದಿ ಶಿವಶರಣರ ತತ್ವಗಳನ್ನು ಸಾರುವ ಉದ್ದೇಶ ಹೊಂದಿದೆ. ದೇಶದ ಭವ್ಯ ಸಂಸ್ಕೃತಿ, ಸಾವಯವ ಕೃಷಿ, ಗೋಸಂರಕ್ಷಣೆ, ಹೈನುಗಾರಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ಪರಂಪರೆಯಲ್ಲಿ ಉಳಿದುಬಂದಿರುವ ವೈಜ್ಞಾನಿಕ ಸತ್ಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಉಪಯುಕ್ತ ವಿಚಾರಗಳನ್ನು ಜನರಿಗೆ ಪರಿಚಯಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಗರದ ನೂತನ ವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ಇರಲಿದೆ. ಜಿಲ್ಲೆಯಾದ್ಯಂತ ಸುಮಾರು ಸಾವಿರಾರು ಜನರು ಭಾಗವಹಿಸಲಿದ್ದು, ಸಮಾವೇಶದಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಮೂರ್ತಿ ಶರಣಯ್ಯ ಶಾಂತಯ್ಯ ಸ್ಥಾವರಮಠ, ವೇದಮೂರ್ತಿ ಸೋಮನಾಥ ಸಿದ್ಧಯ್ಯ ಮಠಪತಿ, ನಾಗಯ್ಯ ವೀರಯ್ಯ ಸ್ಥಾವರಮಠ, ವಿಜಯಕುಮಾರ್ ಸಿದ್ಧಯ್ಯ, ಮೃತ್ಯುಂಜಯ ಬಸಲಿಂಗಯ್ಯ ಹಿರೇಮಠ, ಸಿದ್ಧಯ್ಯ ರಾಚಯ್ಯ ನೀಲಾ, ನಿಜಲಿಂಗಯ್ಯ, ಶಂಕರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.



