ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ಸೆ.28ರಂದು ಕಲಬುರಗಿಯಲ್ಲಿ ಪ್ರತಿಭಟನಾ ರ‍್ಯಾಲಿ

ಕಲಬುರಗಿ, ಸೆ.22: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಸೆ.28ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ವಿವಾದಿತ ಜಿಲ್ಲಾಧ್ಯಕ್ಷ ಭಗವಂತರಾಯಗೌಡ ಕೆ. ಪಾಟೀಲ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೈಕೋರ್ಟ್ ರಸ್ತೆಯಲ್ಲಿದ್ದ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ತೆರವುಗೊಳಿಸಿ ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಸಾಗಿಸಿರುವುದು ಅವಮಾನಕರ ಕ್ರಮ ಎಂದು ಆರೋಪಿಸಿದರು.
ಪ್ರತಿಮೆಯನ್ನು ತೆರವುಗೊಳಿಸಿದ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಪ್ರತಿಮೆ ಇದ್ದ ಸ್ಥಳದಲ್ಲಿಯೇ ಗೌರವಯುತವಾಗಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಸೆ.28ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ ಅವರು 2013ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ್ದು, ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಶೋಷಿತ ವರ್ಗಗಳ ಪರವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದ ನಾಯಕನ ಪ್ರತಿಮೆಯನ್ನು ತೆರವುಗೊಳಿಸಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಫಜಲಪುರ ರಸ್ತೆಯ ಹೈಕೋರ್ಟ್ ಸಮೀಪ ಸಿದ್ದರಾಮಯ್ಯ ಅವರ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿದ್ದರು. 2023ರಲ್ಲಿ ಸಿದ್ದರಾಮಯ್ಯ ಅವರ ಹೆಸರಿನ ನಾಮಫಲಕವನ್ನೂ ತೆರವುಗೊಳಿಸಲಾಗಿತ್ತು. ಇಂತಹ ಕ್ರಮಗಳು ಖಂಡನೀಯ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಅನುಮತಿ ಕೋರಲಾಗಿತ್ತು. ಆದಾಗ್ಯೂ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿದ್ದರು. ಪಾಲಿಕೆ ಅಧಿಕಾರಿಗಳು ಪ್ರತಿಮೆಯನ್ನು ಗೌರವಯುತವಾಗಿ ತೆರವುಗೊಳಿಸುವ ಬದಲು ತ್ಯಾಜ್ಯ ಸಾಗಿಸುವ ವಾಹನದಲ್ಲಿ ಹಾಕಿಕೊಂಡು ಸಾಗಿಸಿರುವುದು ಅವಮಾನಕರ ಎಂದು ಆರೋಪಿಸಿದರು.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಪ್ರತಿಮೆ ತೆರವುಗೊಳಿಸಿರುವುದರಿಂದ ರಾಜ್ಯಾದ್ಯಂತ ಇರುವ ಸಿದ್ದರಾಮಯ್ಯ ಅಭಿಮಾನಿಗಳಿಗೆ ನೋವುಂಟಾಗಿದೆ. ಆದ್ದರಿಂದ ಅದೇ ಸ್ಥಳದಲ್ಲಿ ಗೌರವಯುತವಾಗಿ ಪ್ರತಿಮೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸೆ.28ರಂದು ಕಲಬುರಗಿಯಲ್ಲಿ ನಡೆಯುವ ಪ್ರತಿಭಟನೆಯ ಜೊತೆಗೆ ಬೀದರ್‌ನಿಂದ ಚಾಮರಾಜನಗರದವರೆಗೆ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ತಮ್ಮ ಅಧ್ಯಕ್ಷ ಸ್ಥಾನದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಮಿತಿಯ ಹಿಂದಿನ ಅಧ್ಯಕ್ಷರು ಸ್ವಯಂಪ್ರೇರಿತರಾಗಿ ನೀಡಿದ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಲಾಗಿದೆ. ಈ ಕುರಿತು ನಿರ್ದೇಶಕರ ಸಭೆಯನ್ನೂ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಯಿಬಣ್ಣ ಪೂಜಾರಿ, ಮಲ್ಲಿಕಾರ್ಜುನ ಭಂಕೂರ್, ನಿರ್ಮಲಾ ಬರಗಾಲೆ, ಪರಮೇಶ್ವರ ಆಲಗೂಡ, ಬೀರಣ್ಣ ಕರಗೊಂಡ, ನಾಗೇಶ್ ಮುಚ್ಚಖೇಡ, ಮುದಕಪ್ಪ ಹೊಸಮನಿ, ರಾಜು ನಾಗೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



