ಜಿಲ್ಲಾಸುದ್ದಿ

ಮಾಜಿ ಸಂಸದ ಪ್ರತಾಪಸಿಂಹ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಡಾ. ಡಿ.ಜಿ. ಸಾಗರ್

ಕಲಬುರಗಿ, ಸೆ.22: ದಲಿತ ಸಂಘರ್ಷ ಸಮಿತಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಂಸದ ಪ್ರತಾಪಸಿಂಹ ಕೂಡಲೇ ಕ್ಷಮೆಯಾಚಿಸಬೇಕು. ರಾಜ್ಯ ಸರ್ಕಾರ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪಸಿಂಹ ಅವರು ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ದಲಿತ ಸಂಘರ್ಷ ಸಮಿತಿಯ ಕುರಿತು ಹೊಟ್ಟೆಕಿಚ್ಚಿನಿಂದ ಮಾತನಾಡುವ ಬದಲು ಕರ್ನಾಟಕದಲ್ಲಿ ದಲಿತ ಚಳವಳಿ ನಡೆದುಬಂದಿರುವ ಇತಿಹಾಸದ ಪುಟಗಳನ್ನು ಒಮ್ಮೆ ಗಮನಿಸಬೇಕು ಎಂದು ಹೇಳಿದರು.

ಮಾಜಿ ಸಂಸದರು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಕೋಮುವಾದ, ಹಿಂಸೆ ಮತ್ತು ಜಾತಿ ತಾರತಮ್ಯವನ್ನು ಪ್ರಚೋದಿಸುವ ವಿಚಾರಗಳನ್ನು ಸಮಾಜದಲ್ಲಿ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಮನುವಾದಿ ಚಿಂತನೆಯಿಂದ ಬಂದ ವ್ಯಕ್ತಿಯಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಟಿ. ನರಸೀಪುರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ನೀಲಿ ಶಾಲು ಧರಿಸಿ ಕಾರ್ಯಕ್ರಮ ನಡೆಸಿದವರ ಕುರಿತು ಅವಹೇಳನಕಾರಿ ಹಾಗೂ ಅಸಂಬದ್ಧ ಹೇಳಿಕೆಗಳನ್ನು ನೀಡಿರುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಡಾ. ಸಾಗರ್ ಆರೋಪಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ಅವಮಾನಿಸುವ ರೀತಿಯ ಹೇಳಿಕೆಗಳನ್ನು ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಇಂತಹ ಹೇಳಿಕೆಗಳಿಂದ ಟಿ. ನರಸೀಪುರದ ಸೌಹಾರ್ದಯುತ ವಾತಾವರಣಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಜಾತಿ-ಜಾತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸೌಹಾರ್ದತೆಯಿಂದ ಕೂಡಿರುವ ಟಿ. ನರಸೀಪುರದ ವಾತಾವರಣವನ್ನು ಕಲುಷಿತಗೊಳಿಸುವ ಮತ್ತು ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಪ್ರಯತ್ನವನ್ನು ನಾಗರಿಕ ಸಮಾಜ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಹೇಳಿಕೆ ನೀಡುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಚ್. ಶಂಕರ್, ಸುರೇಶ್ ಹಾದಿಮನಿ, ಎಸ್.ಪಿ. ಸುಳ್ಳದ್, ಉಮೇಶ್ ನರೋಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button