ಜಿಲ್ಲಾಸುದ್ದಿ

ಸ್ವಚ್ಛತೆಯೆ ಸೇವೆ-2026 ಅಭಿಯಾನ:ಸ್ವಚ್ಛತೆಗೆ ಕೈಜೋಡಿಸುವಂತೆ ಜಿಲ್ಲಾ ಪಂಚಾಯತ್ ಸಿ.ಇ.ಓ ಕರೆ

ಕಲಬುರಗಿ,ಸೆ.21: ಗ್ರಾಮೀಣ ಸಮುದಾಯದಲ್ಲಿ ಶುಚಿತ್ವ, ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ನಿಟ್ಟಿನಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತೆಯನ್ನು ಜನಾಂದೋಲನವಾಗಿ ರೂಪಿಸುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಅಕ್ಟೋಬರ್ 2ರ ವರೆಗೆ ನಡೆಯಲಿರುವ “ಸ್ವಚ್ಛತೆಯೇ ಸೇವೆ-2026” (ಸ್ವಚ್ಛತಾ ಹೀ ಸೇವಾ) ಅಭಿಯಾನಕ್ಕೆ ಎಲ್ಲರು ಕೈಜೋಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ್ ಕರೆ ನೀಡಿದ್ದಾರೆ.

ಸ್ವಯಂ ಪ್ರೇರಿತ ಸೇವಾ ಮನೋಭಾವವನ್ನು ಉತ್ತೇಜಿಸುವುದು ಹಾಗೂ ಸಮುದಾಯ ಭಾಗವಹಿಸುವಿಕೆಯ ಮೂಲಕ ಸಾಮೂಹಿಕ ಸ್ವಚ್ಚತಾ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಸ್ವಚ್ಛತಾ-ಹಿ-ಸೇವಾ ಅಭಿಯಾನವು ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್ 17 ರಿಂದ ಆರಂಭವಾಗಿದ್ದು, ಅಕ್ಟೋಬರ್ 2ರ ವರೆಗೆ ನಡೆಯಲಿದೆ. ಗ್ರಾಮೀಣ ಭಾಗದ ಜನಸಮೂಹ ಈ “ಸ್ವಚ್ಛೋತ್ಸವ” ದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಅಭಿಯಾನದ ಅಂಗವಾಗಿ ಕಪ್ಪುಚುಕ್ಕೆ ಮತ್ತು ಕೊಳಕು ಪ್ರದೇಶಗಳು ಹಾಗೂ ಹೆಚ್ಚಿನ ಜನ ಸಂಚಾರವಿರುವ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಸುಂದರ ಸ್ಥಳಗಳನ್ನಾಗಿ ಪರಿವರ್ತಿಸುವುದು. ಶಾಲಾ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಚ್ಛ ಪಾಠಶಾಲಾ-ಸ್ವಚ್ಛತೆಗಾಗಿ ಯುವಜನತೆ ಎಂಬುದನ್ನು ಸಾರುವುದು. ಸಫಾಯಿ ಮಿತ್ರರು/ ಸ್ವಚ್ಛತಾಗ್ರಹಿಗಳು/ ಸ್ವಯಂ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ, ಪಿ.ಪಿ.ಇ ಕಿಟ್/ ಸುರಕ್ಷತಾ ಸಾಧನ ವಿತರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯುವಂತೆ ತಿಳಿಸುವುದಲ್ಲದೆ ಸ್ಥಳೀಯ ಮಟ್ಟದಲ್ಲಿ ಸಫಾಯಿ ಮಿತ್ರರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕಸ ವಿಂಗಡಣೆ ಕುರಿತು ಮನೆ-ಮನೆ ಜಾಗೃತಿ ಅಭಿಯಾನ, ಕಾಂಪೋಸ್ಟಿಂಗ್ ಉತ್ತೇಜನ, ಸ್ವಚ್ಛತೆಗಾಗಿ ಕ್ರೀಡೆ, ಸ್ವಚ್ಛ ಹಬ್ಬಗಳು, ತಾಯಿ ಹೆಸರಿನಲ್ಲಿ ಒಂದು ಸಸಿ (ಏಕ್ ಪೇಡ್ ಮಾ ಕೆ ನಾಮ್), ಸೆ.27ರ ವಿಶ್ವ ಪ್ರವಾಸೋದ್ಯಮ ದಿನದಂದು ವಿಶೇಷ ಚಟುವಟಿಕೆ, ಅಕ್ಟೋಬರ್ 2ಕ್ಕೆ ವಿಶೇಷ ಗ್ರಾಮ ಸಭೆ ನಡೆಸುವ ಮೂಲಕ ಸ್ವಚ್ಛತೆಗಾಗಿ ಜನಸಹಭಾಗಿತ್ವ ಪಡೆಯಲಾಗುತ್ತದೆ. ಇದಲ್ಲದೆ ತ್ಯಾಜ್ಯದಿಂದ ಸಂಪತ್ತು ಮತ್ತು ತ್ಯಾಜ್ಯದಿಂದ ಕಲಾಕೃತಿ ಮೂಲಕ ವೃತ್ತಾಕಾರದ ಆರ್ಥಿಕತೆ ಉತ್ತೇಜಿಸಿ ಸ್ವಚ್ಛತೆಯಿಂದ ಸಮೃದ್ಧಿಯತ್ತ ದಾಪುಗಾಲು ಇಡುವ ವಿನೂತನ ಚಟುಟವಿಕೆಗಳ ಕುರಿತು ಬೆಳಕು ಚೆಲ್ಲುವ ಕಾರ್ಯಚಟುವಟಿಕೆಗಳು ಅಭಿಯಾನದಲ್ಲಿ ಇರಲಿವೆ ಎಂದಿದ್ದಾರೆ.

ಅಕ್ಟೋಬರ್ 1ಕ್ಕೆ ಸಾಮೂಹಿಕ ಶ್ರಮದಾನ:

ಅಭಿಯಾನದ ವಿವಿಧ ಚಟುವಟಿಕೆಗಳ ಜೊತೆಗೆ ಬರುವ ಅಕ್ಟೋಬರ್ 1 ರಂದು ಪ್ರತಿ ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ದಿನ, ಒಂದು ಗಂಟೆ, ಒಟ್ಟಾಗಿ ಸಾಮೂಹಿಕ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರವಾಹ ಅಥವಾ ನೈಸರ್ಗಿಕ ವಿಕೋಪದಿಂದ ಬಾಧಿತವಾಗಿರುವ ಪ್ರದೇಶದಲ್ಲಿ ಸ್ವಚ್ಛತಾ ಪರಿಸ್ಥಿತಿ ಆದರಿಸಿ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ತಿಳಿಸಲಾಗುತ್ತಿದೆ. ಚುನಾಯಿತ ಜನ ಪ್ರತಿನಿಧಿಗಳು, ಸಾಂಸ್ಕೃತಿಕ ಗಣ್ಯರು, ಸ್ವಚ್ಛತಾ ರಾಯಭಾರಿಗಳು, ಧಾರ್ಮಿಕ ನಾಯಕರು, ನಿವೃತ್ತ ಸೈನಿಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಹಿರಿಯ ನಾಗರಿಕರು, ಯುವಜನತೆ, ಶಾಲಾ ಮಕ್ಕಳು, ಸ್ಥಳೀಯ ಸಂಸ್ಥೆಗಳು, ಎನ್.ಜಿ.ಓಗಳು ಹೀಗೆ ಎಲ್ಲರ ಸಹಕಾರ ಪಡೆದು ಅಭಿಯಾನ ಯಶಸ್ವಿಯಾಗಿ ನೆರವೇರುವಂತೆ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಷ್ಠಾನ ಮಾಡಲು ತಾಲೂಕಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿ.ಇ.ಓ ರಾಹುಲ್ ಸಂಕನೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button