ಜಿಲ್ಲಾಸುದ್ದಿ

ಆಯುರ್ವೇದ ದಿನಾಚರಣೆ: ಸೆ.23ರಂದು ಉಚಿತ ಆಯುರ್ವೇದ, ಪಂಚಕರ್ಮ ಆರೋಗ್ಯ ಶಿಬಿರ

ಕಲಬುರಗಿ, ಸೆ.21: ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಮಾರ್ಗದಲ್ಲಿರುವ ಆನಂದ ಹೋಟೆಲ್‌ ಸಮೀಪದ ಬನಾಳೆ ಆಸ್ಪತ್ರೆ ಎದುರಿನ ಡಾ. ಶೆಟ್ಟೀಸ್‌ ಆಯುರ್ ಕ್ಲಿನಿಕ್‌ನಲ್ಲಿ ಸೆ.23ರಂದು ಉಚಿತ ಆಯುರ್ವೇದ ಹಾಗೂ ಪಂಚಕರ್ಮ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಡಾ. ರಕ್ಷಾ ಎಸ್. ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯಕರ ನಾಳೆಗಾಗಿ ಆಯುರ್ವೇದ, ಸ್ವಸ್ಥ ಭವಿಷ್ಯಕ್ಕಾಗಿ ಆಯುರ್ವೇದ’ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಶಿಬಿರದಲ್ಲಿ ಸಾರ್ವಜನಿಕರಿಗೆ ಆಯುರ್ವೇದದ ಮಹತ್ವ, ರೋಗನಿರೋಧಕ ಜೀವನಶೈಲಿ ಹಾಗೂ ಆರೋಗ್ಯಕರ ದಿನಚರಿ ಕುರಿತು ಜಾಗೃತಿ ಮೂಡಿಸಲಾಗುವುದು. ಅಭ್ಯಂಗ, ಶಿರೋಧಾರಾ, ನಸ್ಯ, ಕಟಿಬಸ್ತಿ ಸೇರಿದಂತೆ ವಿವಿಧ ಪಂಚಕರ್ಮ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಶಿಬಿರದ ಅಂಗವಾಗಿ ಉಚಿತ ಪ್ರಕೃತಿ ವಿಶ್ಲೇಷಣೆ ಹಾಗೂ ನಾಡಿ ಪರೀಕ್ಷೆ ನಡೆಸಲಾಗುವುದು. ಮಧುಮೇಹ, ರಕ್ತದೊತ್ತಡ, ಸ್ತೂಲಕಾಯ, ಸಂಧಿನೋವು, ಆತಂಕ, ಚರ್ಮರೋಗ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಕುರಿತು ಉಚಿತ ಆಯುರ್ವೇದ ವೈದ್ಯಕೀಯ ಸಲಹೆ ನೀಡಲಾಗುವುದು. ಆಹಾರ ಪದ್ಧತಿ ಹಾಗೂ ದಿನಚರಿ ಕುರಿತು ಮಾರ್ಗದರ್ಶನವೂ ದೊರೆಯಲಿದೆ ಎಂದರು.

ಫ್ಯಾಟಿ ಲಿವರ್, ಕಾಮಾಲೆ ಹಾಗೂ ಇತರ ಯಕೃತ್ ಸಂಬಂಧಿತ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸಾ ವಿಧಾನಗಳು ಮತ್ತು ಲಿವರ್ ಡಿಟಾಕ್ಸ್‌ ಕುರಿತು ಜಾಗೃತಿ ಮೂಡಿಸಲಾಗುವುದು. 6 ತಿಂಗಳಿಂದ 16 ವರ್ಷದೊಳಗಿನ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನದ ಕುರಿತು ಮಾಹಿತಿ ನೀಡಲಾಗುವುದು. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಆಯುರ್ವೇದ ಪದ್ಧತಿಯಾಗಿದೆ ಎಂದು ತಿಳಿಸಿದರು.

ಇದಲ್ಲದೆ ವಿವಿಧ ಚರ್ಮರೋಗಗಳು, ಮೊಡವೆ, ಚರ್ಮದ ಕಪ್ಪುಕಲೆಗಳು ಹಾಗೂ ಹೈಪರ್‌ಪಿಗ್ಮೆಂಟೇಶನ್ ಸೇರಿದಂತೆ ಸೌಂದರ್ಯ ಸಂಬಂಧಿತ ಸಮಸ್ಯೆಗಳಿಗೆ ಆಯುರ್ವೇದದ ಒಳಔಷಧಿ, ಹೊರಚಿಕಿತ್ಸೆ ಮತ್ತು ಪಂಚಕರ್ಮ ವಿಧಾನಗಳ ಕುರಿತು ಮಾಹಿತಿ ನೀಡಲಾಗುವುದು. ಅಜೀರ್ಣ, ಮಲಬದ್ಧತೆ ಹಾಗೂ ಮನೋವಿಕಾರಗಳಿಗೆ ಆಯುರ್ವೇದ ಚಿಕಿತ್ಸೆಯ ಕುರಿತು ಸಲಹೆ ನೀಡಲಾಗುವುದು ಎಂದರು.

ಸಾರ್ವಜನಿಕರಿಗೆ ಆಯುರ್ವೇದ, ಪಂಚಕರ್ಮ, ಆರೋಗ್ಯಕರ ಜೀವನಶೈಲಿ ಹಾಗೂ ರೋಗನಿರೋಧಕ ಆರೋಗ್ಯ ಸಂರಕ್ಷಣೆ ಕುರಿತು ಅರಿವು ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಡಾ. ರಕ್ಷಾ ಎಸ್. ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್. ಶೆಟ್ಟಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button