ಜಿಲ್ಲಾಸುದ್ದಿ

ಕಾಂಗ್ರೆಸ್‌ನಿಂದ ಸೇವಾ ಭದ್ರತೆ ಗ್ಯಾರಂಟಿ: ಅತಿಥಿ ಉಪನ್ಯಾಸಕರ ಖಾಯಂಗೊಳಿಸುವಿಕೆಗೆ ಆಗ್ರಹ

ಕಲಬುರಗಿ, ಸೆ.21: ಚುನಾವಣಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಾಗಿ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಘೋಷಿಸಿತ್ತು. ಇದೀಗ ಅಧಿಕಾರದಲ್ಲಿರುವ ರಾಜ್ಯ ಸರ್ಕಾರವು ಕೂಡಲೇ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ ಶಿರೋಳೆ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಇಲಾಖೆಯಲ್ಲಿ ಬೋಧಕೇತರ ಸಿಬ್ಬಂದಿಯಷ್ಟೇ ಅಲ್ಲದೆ ಬೋಧಕ ಹುದ್ದೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಖಾಲಿ ಇವೆ. ಕಳೆದ ಹತ್ತಾರು ವರ್ಷಗಳಿಂದ ಈ ಹುದ್ದೆಗಳಲ್ಲಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸೇವಾ ಭದ್ರತೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು.

ಶೈಕ್ಷಣಿಕ ಅರ್ಹತೆ ವಿಚಾರದಲ್ಲಿ ಹೊರಬಿದ್ದ ನ್ಯಾಯಾಲಯದ ಆದೇಶದಿಂದಾಗಿ ಹಲವು ಅತಿಥಿ ಉಪನ್ಯಾಸಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಅತಿಥಿ ಉಪನ್ಯಾಸಕರ ವರ್ತಮಾನ ಹಾಗೂ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಈವರೆಗೆ ವಿವಿಧ ಪಕ್ಷಗಳ ಸರ್ಕಾರಗಳು ಆಡಳಿತ ನಡೆಸಿವೆ. ಪ್ರತಿಯೊಂದು ಪಕ್ಷವೂ ವಿರೋಧ ಪಕ್ಷದಲ್ಲಿದ್ದಾಗ ಅತಿಥಿ ಉಪನ್ಯಾಸಕರ ಪರವಾಗಿ ಅನುಕಂಪದ ಮಾತುಗಳನ್ನಾಡುತ್ತದೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ನಿಯಮಗಳ ನೆಪದಲ್ಲಿ ಸೇವೆಯನ್ನು ಖಾಯಂಗೊಳಿಸದೆ ವಿಳಂಬ ಮಾಡುತ್ತಿರುವುದು ವಿಷಾದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷವು ತನ್ನ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಾಗಿ ಘೋಷಿಸಿತ್ತು. ಆದರೆ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸುವ ನಿಟ್ಟಿನಲ್ಲಿ ನೀಡಿದ್ದ ಭರವಸೆಯಂತೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಈ ಕುರಿತು ಭರವಸೆ ನೀಡಲಾಗಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಡಾ. ಚಂದ್ರಕಾಂತ ಶಿರೋಳೆ ಬೇಸರ ವ್ಯಕ್ತಪಡಿಸಿದರು.

ಈ ಮಧ್ಯೆ, ಐದು ವರ್ಷಕ್ಕೂ ಹೆಚ್ಚು ಸೇವಾನುಭವ ಹೊಂದಿರುವ ಹಾಗೂ ಶೈಕ್ಷಣಿಕ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಹಿತ ಕಾಪಾಡಲು ‘ಶೈಕ್ಷಣಿಕ ಸಂಯೋಜಕರು’ ಎಂಬ ಹೊಸ ಜವಾಬ್ದಾರಿ ಸೃಷ್ಟಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಈ ಹುದ್ದೆಯ ಕೆಲಸದ ಜವಾಬ್ದಾರಿಗಳ ಕುರಿತು ಸ್ಪಷ್ಟತೆ ಇಲ್ಲದಿರುವುದು ಹಾಗೂ ಅದನ್ನು ಕೇವಲ ಮೂರು ವರ್ಷಗಳಿಗೆ ಸೀಮಿತಗೊಳಿಸಿರುವ ಕ್ರಮ ಸಮಂಜಸವಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ. ನಾಗನಗೌಡ ಪಾಟೀಲ, ಡಾ. ಬಾಬುರಾವ್ ಸಾಗರ, ಡಾ. ರವಿ ಬಿಳವಾರ, ಡಾ. ಬಾಬು ಈ. ಪೂಜಾರಿ, ಡಾ. ಪ್ರಕಾಶ್ ಬಡಿಗೇರ್, ಡಾ. ಮಾರುತಿ ಮಾನಪಳ್ಳೆ, ಡಾ. ಶರಣು ಮೈಸಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button