ಜಿಲ್ಲಾಸುದ್ದಿ

ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಬಿಜೆಪಿ ಮುಖಂಡ ಮದ್ರಿಕಿ ಬೆಂಬಲ

ಕಲಬುರಗಿ, ಸೆ.21: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸೆ.27ರಂದು ಆಯೋಜಿಸಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಅಭೂತಪೂರ್ವವಾಗಿ ಯಶಸ್ವಿಯಾಗಲಿದೆ ಎಂದು ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಕಾಂಗ್ರೆಸ್‌ ಕೃಪಾಪೋಷಿತ ನಾಟಕ ಮಂಡಳಿಯ ಹಿರಿಯ ಕಲಾವಿದರು ಎಂದು ಟೀಕಿಸಿದರು. ಬಸವಾದಿ ಶರಣರ ತತ್ವಗಳನ್ನು ಹಿಂದೂ ಧರ್ಮದೊಂದಿಗೆ ತಳುಕು ಹಾಕುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ನಿಲುವನ್ನು ಅವರು ಪ್ರಶ್ನಿಸಿದರು.

ಶೈವ ಮತ್ತು ವೈಷ್ಣವ ಪಂಥಗಳು ಹಿಂದೂ ಧರ್ಮದ ಎರಡು ಕಣ್ಣುಗಳಿದ್ದಂತೆ. ವೈದಿಕರ ಶಿವ ಬೇರೆ, ಲಿಂಗಾಯತರ ಶಿವ ಬೇರೆ ಎಂಬ ರೀತಿಯ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದು ಸರಿಯಲ್ಲ. ಬಸವಣ್ಣನವರ ಅಂಕಿತನಾಮ ‘ಕೂಡಲ ಸಂಗಮದೇವ’. ಬಸವಣ್ಣನವರು ಸನಾತನ ಧರ್ಮ ಅಥವಾ ಬ್ರಾಹ್ಮಣರನ್ನು ವಿರೋಧಿಸಿರಲಿಲ್ಲ. ಹಿಂದೂ ಧರ್ಮದಲ್ಲಿದ್ದ ಕೆಲವು ಲೋಪದೋಷಗಳನ್ನು ಅವರು ಪ್ರಶ್ನಿಸಿದ್ದರು ಎಂಬುದು ಅವರ ನಿಲುವಾಗಿದೆ ಎಂದು ಮದ್ರಿಕಿ ಹೇಳಿದರು.

‘ಬಸವಾದಿ ಶರಣರ ಹಿಂದೂ ಸಮಾವೇಶ’ವನ್ನು ವೈದಿಕರಣ ಎಂದು ಕರೆಯುವವರು, ಲಿಂಗಾಯತ-ಮುಸ್ಲಿಂ ಭಾವೈಕ್ಯತಾ ಸಭೆ ನಡೆಸಿದವರಿಗೆ ತಾಲಿಬಾನಿಗಳು ಎಂದು ಕರೆಯಬೇಕೆ ಎಂದು ಪ್ರಶ್ನಿಸಿದರು. ಸನಾತನ ಹಿಂದೂ ಧರ್ಮದ ಬಗ್ಗೆ ಬುದ್ಧಿಜೀವಿಗಳು ಇಷ್ಟೊಂದು ದ್ವೇಷ ಏಕೆ ಹೊಂದಿದ್ದಾರೆ ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದ ಶಕ್ತಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪವಿತ್ರ ಸಂಘಟನೆ ಎಂದು ಅವರು ಹೇಳಿದರು. ಅನಗತ್ಯವಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಟೀಕಿಸಿ ಪ್ರತಿಭಟನೆ ನಡೆಸುವುದು ಕೆಲವರಿಗೆ ಉದ್ಯೋಗವಾಗಿಬಿಟ್ಟಿದೆ ಎಂದು ಟೀಕಿಸಿದರು.

ಕನ್ನೇರಿ ಶ್ರೀಗಳು ಮಹಾ ಮಾನವತಾವಾದಿಯಾಗಿದ್ದು, ಬಸವ ಪೀಠದಿಂದ ಬಂದವರು. ಅವರ ಮಠದಲ್ಲಿ ಬಡ ಮಕ್ಕಳಿಗೆ ಯಾವುದೇ ಜಾತಿಭೇದವಿಲ್ಲದೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ನಾಡಿನ ರೈತರಿಗೆ ಸಾವಯವ ಕೃಷಿ ಕುರಿತು ಮಾರ್ಗದರ್ಶನ ನೀಡುತ್ತಿರುವ ಅವರು, ಸ್ವತಃ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ ಎಂದು ಮದ್ರಿಕಿ ಹೇಳಿದರು.

ಬಸವಾದಿ ಶರಣರನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವುದೇ ತಪ್ಪು ಎಂಬ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಅವರನ್ನು ಇಸ್ಲಾಂ ಅಥವಾ ಇತರ ಧರ್ಮಗಳೊಂದಿಗೆ ಜೋಡಿಸುವುದಕ್ಕೆ ಏಕೆ ವಿರೋಧ ವ್ಯಕ್ತವಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಲಿಂಗಾಯತ ಸಮಾಜ ಮತ್ತು ಸನಾತನ ಧರ್ಮವನ್ನು ಒಡೆಯುವ ಪ್ರಯತ್ನಗಳಿಗೆ ಕೈಜೋಡಿಸಬಾರದು ಎಂದು ಮನವಿ ಮಾಡಿದರು.

ಸಮಾವೇಶದ ನೇತೃತ್ವ ವಹಿಸಿರುವ ಚಂದು ಪಾಟೀಲ ಅವರಿಗೆ ಹಿರಿಯ ಸ್ವಯಂಘೋಷಿತ ಬುದ್ಧಿಜೀವಿಗಳು ಧಿಕ್ಕಾರ ಹೇಳಿದರೆ, ಸೆ.27ರಂದು ಬಸವಾದಿ ಶರಣರ ಸಮಾವೇಶಕ್ಕೆ ಜಿಲ್ಲೆಯ ಮಹಾಜನತೆ ನೂತನ ವಿದ್ಯಾಲಯ ಮೈದಾನಕ್ಕೆ ಆಗಮಿಸಿ ಜಯಕಾರ ಹಾಕಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸುರೇಶ್ ರಾಠೋಡ್, ಚಿದಾನಂದ ಪಾಟೀಲ, ಅರವಿಂದ ಪೊದ್ದಾರ್, ವಿಕಾಸ್ ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button