ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಜೆವರ್ಗಿ, ಸೆ.18: ತಾಲ್ಲೂಕಿನ ರಂಜಣಗಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಅನ್ನಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಬೇಕಾದ ಅಕ್ಕಿಯನ್ನು ಸುಮಾರು ಎರಡು ಕಿ.ಮೀ. ದೂರದಲ್ಲಿರುವ ತಾಂಡಾದಲ್ಲಿ ವಿತರಿಸುತ್ತಿದ್ದು, ಇದರಿಂದ ವಯೋವೃದ್ಧರು ಹಾಗೂ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಕ್ಕಿಯನ್ನು ಗ್ರಾಮದಲ್ಲಿಯೇ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸುಮಾರು 250 ಪಡಿತರ ಚೀಟಿಗಳಿದ್ದು, ತಾಂಡಾದಲ್ಲಿ ಕೇವಲ 50 ಪಡಿತರ ಚೀಟಿಗಳಿವೆ. ಗ್ರಾಮ ಹಾಗೂ ತಾಂಡಾದಲ್ಲಿ ಎರಡು ಕಡೆ ವಿತರಣೆ ಕೇಂದ್ರಗಳಿದ್ದರೂ ಯಾವುದೇ ತಕರಾರು ಇರಲಿಲ್ಲ. ಆದರೆ ನ್ಯಾಯಬೆಲೆ ಅಂಗಡಿ ಮಾಲೀಕರು ತಾಂಡಾದಲ್ಲಿಯೇ ಅಕ್ಕಿ ವಿತರಿಸುವುದಾಗಿ ಹೇಳುತ್ತಿದ್ದು, ಅಕ್ಕಿ ಪಡೆಯಬೇಕಾದರೆ ತಾಂಡಾಕ್ಕೆ ತೆರಳಿ ತೆಗೆದುಕೊಂಡು ಬರಬೇಕು. ಇದಕ್ಕೆ ವಿರೋಧಿಸಿದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅಲ್ಲದೆ, ಆಹಾರಧಾನ್ಯ ಪಡೆಯಲು ತೆರಳುವ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಈ ಕುರಿತು ಈಗಾಗಲೇ ತಾಲ್ಲೂಕು ಆಹಾರ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಡಿ ಅವರಿಗೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜೆವರ್ಗಿ ತಹಸೀಲ್ದಾರ್ ಅವರೊಂದಿಗೆ ಮಾತನಾಡಿ, ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆದರೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕಲಬುರಗಿ-ವಿಜಯಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಖಾಜಾಪಟೇಲ್ ನಾಡಗೌಡ, ಮಲ್ಲಿಕಾರ್ಜುನ ಜೋಗುರ, ಮೀರಾಸಾಬ್ ಯಾಳವಾರ, ಅಜೀಜ್ ಪಟೇಲ್ ಮಾಲಿ, ರೆಹಮಾನ್ ಪಟೇಲ್ ಹೊಸಮನಿ, ಸರದಾರ್ ಪಟೇಲ್ ಹೊಸಮನಿ, ಅಲ್ತಾಫ್ ಯಾಳವಾರ, ಅನಾಸರ್ ಪಟೇಲ್, ಹಳಿಮನಿ ಮಲಕಪ್ಪ ಸಿಂಗೇ, ಹಣಮಂತ ಪೂಜಾರಿ, ಪ್ರಕಾಶ್ ತಲವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



