ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಎಚ್ಒ, ಬಸವಕಲ್ಯಾಣ ಟಿಎಚ್ಒ ಅಮಾನತು

ಬೀದರ್, ಸೆ.18: ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಭಾವಚಿತ್ರವನ್ನು ವೇದಿಕೆಯಲ್ಲಿ ಅಳವಡಿಸದೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಆರೋಗ್ಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಬೀದರ್ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ಹಾಗೂ ಬಸವಕಲ್ಯಾಣ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ ಅಮಾನತುಗೊಂಡ ಅಧಿಕಾರಿಗಳು. ಕರ್ತವ್ಯಲೋಪ ಹಾಗೂ ಶಿಷ್ಟಾಚಾರ ಉಲ್ಲಂಘನೆಯ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹೆಗಡೆ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಸೆ.16ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನೂತನ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ ಅವರ ಒತ್ತಡಕ್ಕೆ ಮಣಿದ ಅಧಿಕಾರಿಗಳು, ಅಧಿಕೃತ ವೇದಿಕೆಯ ಬ್ಯಾನರ್ನಲ್ಲಿ ಆರೋಗ್ಯ ಇಲಾಖೆಯ ಸಚಿವ ಯು.ಟಿ. ಖಾದರ್ ಅವರ ಭಾವಚಿತ್ರ ಅಳವಡಿಸದೆ ಕಾರ್ಯಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಸರ್ಕಾರಿ ಕಾರ್ಯಕ್ರಮಗಳ ನಿಯಮಾವಳಿಯಂತೆ ಇಲಾಖೆಯ ಸಚಿವರ ಭಾವಚಿತ್ರವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಸೇರಿದಂತೆ ಸ್ಥಳೀಯ ಮುಖಂಡರು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ.
ಶಾಸಕರ ಮಾತು ಕೇಳಿ ಸರ್ಕಾರದ ಶಿಷ್ಟಾಚಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ.



