ಜಿಲ್ಲಾಸುದ್ದಿ

ಪ್ರಿಯಾಂಕ್ ಖರ್ಗೆ ನೀಡಿದ ಕೋಟಿ ಕೋಟಿ ಅನುದಾನ ನೀರುಪಾಲು: ಮೊಗಲಾದಲ್ಲಿ ಕಳಪೆ ಕಾಮಗಾರಿ ಆರೋಪ

ಚಿತ್ತಾಪುರ, ಸೆ.18: ತಾಲ್ಲೂಕಿನ ಮೊಗಲಾ ಗ್ರಾಮದ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರೂ, ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅನುದಾನದ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರಾದ ಶರಣಬಸಪ್ಪ ಕೊಡಂಗಲ್, ಬನ್ನೇಶ್ ಸುಲೇಗಾಂವ್ ಹಾಗೂ ಮಲ್ಲೇಶ್ ಕೆಂಪನೂರು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಬಿಡುಗಡೆ ಮಾಡಿರುವ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಮೊಗಲಾ ಗ್ರಾಮದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.

ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಒಟ್ಟು ₹35 ಲಕ್ಷ ವೆಚ್ಚದಲ್ಲಿ ಮೊಗಲಾ ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕೆಲವೆಡೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಹಲವು ಕಡೆ ಚರಂಡಿ ನಿರ್ಮಾಣ ಮಾಡಿಲ್ಲ. ನಿರ್ಮಿಸಿರುವ ಚರಂಡಿಗಳೂ ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ದೂರಿದರು.

ಕಾಮಗಾರಿಯ ಗುಣಮಟ್ಟದ ಕುರಿತು ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರೂ ಸೂಕ್ತ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಲ್ಲದೆ, ಜಿಲ್ಲಾ ಪಂಚಾಯಿತಿ ಹಾಗೂ ಪಿಆರ್‌ಇಡಿ ಯೋಜನೆಯಡಿ ₹1.15 ಕೋಟಿ ವೆಚ್ಚದಲ್ಲಿ ಗ್ರಾಮದ ಸಾಮಾನ್ಯ ಕಾಲೋನಿಯಲ್ಲಿ ಕೈಗೆತ್ತಿಕೊಂಡಿರುವ ಸಮಗ್ರ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಯಲ್ಲಿಯೂ ಕಳಪೆ ಗುಣಮಟ್ಟ ಕಂಡುಬಂದಿದೆ ಎಂದು ಅವರು ದೂರಿದರು. ರಸ್ತೆ ನಿರ್ಮಾಣವಾಗಿ ಕೆಲವೇ ತಿಂಗಳುಗಳಾಗುವ ಮುನ್ನವೇ ಹಲವು ಕಡೆ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಚರಂಡಿ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟಿರುವುದರಿಂದ ಗಲೀಜು ನೀರು ನೇರವಾಗಿ ಹೊಸದಾಗಿ ನಿರ್ಮಿಸಿರುವ ಸಿಸಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ವೃದ್ಧರು ಹಾಗೂ ಮಕ್ಕಳು ಜಾರಿ ಬೀಳುವ ಆತಂಕ ಎದುರಾಗಿದೆ ಎಂದು ಹೇಳಿದರು.

ಈ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಹಾಗೂ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಕಾಮಗಾರಿಗಳ ಬಿಲ್‌ಗಳನ್ನು ತಡೆಹಿಡಿದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮೊಗಲಾ ಗ್ರಾಮದ ಅಭಿವೃದ್ಧಿಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರೂ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿ ಕೈಗೊಂಡಿರುವ ಕಬರಸ್ತಾನ ಕಾಂಪೌಂಡ್, ನಾರಾಯಣ ಗುರು ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರದ ಕಾಮಗಾರಿಗಳೂ ಕಳಪೆ ಮಟ್ಟದಲ್ಲಿವೆ ಎಂದು ದೂರಿದ ಅವರು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button