ಹೆಲ್ಮೆಟ್ ಜಾಗೃತಿಗೆ ಸೆ.13ರಂದು ವಿಶ್ವಕರ್ಮ ಸಮಾಜದಿಂದ ಬೈಕ್ ರ್ಯಾಲಿ

ಬೀದರ್, ಸೆ.12: ವಿಶ್ವಕರ್ಮ ಜಯಂತಿ ಅಂಗವಾಗಿ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ವತಿಯಿಂದ ಹೆಲ್ಮೆಟ್ ಬಳಕೆ ಕುರಿತು ಜಾಗೃತಿ ಮೂಡಿಸಲು ಸೆ.13ರಂದು ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಮಹೇಶ್ ವಿಶ್ವಕರ್ಮ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 11ಕ್ಕೆ ಹೊಸ ಬಸ್ ಡಿಪೊ–2ರ ಎದುರಿನ ದೇವಿ ಕಾಲೊನಿಯಲ್ಲಿರುವ ವಿಶ್ವಕರ್ಮ ಕಾಳಿಕಾದೇವಿ ದೇವಸ್ಥಾನದಿಂದ ರ್ಯಾಲಿ ಆರಂಭವಾಗಲಿದೆ. ಗುರುದ್ವಾರ ಕಮಾನ್, ಮಡಿವಾಳ ವೃತ್ತ, ರೋಟರಿ ಕನ್ನಡಾಂಬೆ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ರಾಮಚೌಕ್, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಹಾಗೂ ಕುಂಬಾರವಾಡ ಕಮಾನ್ ಮೂಲಕ ಸಾಗಿ ಮೌನೇಶ್ವರ ಕಾಲೊನಿಯ ಮೌನೇಶ್ವರ ಮಂದಿರ ತಲುಪಿ ರ್ಯಾಲಿ ಮುಕ್ತಾಯಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.
ಬೈಕ್ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವುದರಿಂದ ಸವಾರರ ಜೀವ ರಕ್ಷಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆ.17ರಂದು ನಡೆಯಲಿರುವ ವಿಶ್ವಕರ್ಮ ಜಯಂತಿ ಪ್ರಯುಕ್ತ ಬೈಕ್ ಸವಾರರಲ್ಲಿ ಹೆಲ್ಮೆಟ್ ಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ವಿಶ್ವಕರ್ಮ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಬೇಕು ಎಂದು ಮೌನೇಶ್ವರ ದೇವಸ್ಥಾನದ ಅಧ್ಯಕ್ಷ ನಾರಾಯಣ ವಿಶ್ವಕರ್ಮ, ವಿಶ್ವಕರ್ಮ ಧರ್ಮವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ, ಜಿಲ್ಲಾ ಕಾರ್ಪೆಂಟರ್ ಸಂಘದ ಅಧ್ಯಕ್ಷ ಸುರೇಶ್ ವಿಶ್ವಕರ್ಮ, ಸದಸ್ಯ ಬಾಬುರಾವ್ ವಿಶ್ವಕರ್ಮ ಚಾಂಬೋಳ, ಉಮೇಶ್ ವಿಶ್ವಕರ್ಮ, ರಮೇಶ್ ವಿಶ್ವಕರ್ಮ ಜಾಂಪಾಡ್, ಜಗನ್ನಾಥ ಘೋಡಂಪಳ್ಳಿ ಹಾಗೂ ವಿಜಯಕುಮಾರ ಹಲಬರ್ಗಾ ಮನವಿ ಮಾಡಿದ್ದಾರೆ.



