ನ್ಯಾಯಾಂಗ ಸದೃಢ ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿ: ನ್ಯಾ. ಕೃಷ್ಣ ದೀಕ್ಷಿತ್

ಬೀದರ್, ಸೆ.12: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯಾಂಗವು ಪ್ರಮುಖ ಶಕ್ತಿಯಾಗಿದೆ ಎಂದು ಕರ್ನಾಟಕ ಹಾಗೂ ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಆರ್.ವಿ. ಬಿಡಪ್ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗದ ಕಾರ್ಯ ಕೇವಲ ವಿವಾದಗಳನ್ನು ಬಗೆಹರಿಸುವುದಕ್ಕೆ ಸೀಮಿತವಾಗಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸುವ ಮಹತ್ವದ ಸಂಸ್ಥೆಯಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆ ಇಲ್ಲದೆ ಬಲಿಷ್ಠ ಪ್ರಜಾಪ್ರಭುತ್ವ ಮತ್ತು ಸುಸ್ಥಿರ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾದ ನ್ಯಾಯಾಂಗವು ಕಾನೂನುಬದ್ಧವಾಗಿ ವಿವಾದಗಳನ್ನು ಪರಿಹರಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸೌಹಾರ್ದವನ್ನು ಸ್ಥಾಪಿಸುತ್ತದೆ ಎಂದರು.
ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರದ ಮೇಲೆ ಸಂವಿಧಾನಾತ್ಮಕ ನಿಯಂತ್ರಣವನ್ನೂ ನ್ಯಾಯಾಂಗ ಹೊಂದಿದ್ದು, ಅಧಿಕಾರದ ದುರುಪಯೋಗಕ್ಕೆ ತಡೆಯೊಡ್ಡುವ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಸಂವಿಧಾನದ ಆಶಯಗಳ ರಕ್ಷಣೆ, ಕಾನೂನುಬದ್ಧ ಆಡಳಿತ ಸ್ಥಾಪನೆ ಹಾಗೂ ನಾಗರಿಕರ ಹಕ್ಕುಗಳ ಸಂರಕ್ಷಣೆಯಲ್ಲಿ ನ್ಯಾಯಾಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಜಾರಿಗೊಳಿಸುವ ಮೂಲಕ ನ್ಯಾಯಾಂಗವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ, ನಿರ್ದೇಶಕರಾದ ಚಂದ್ರಕಾಂತ ಶೆಟಕಾರ್, ಶಿವಶಂಕರ ಶೆಟಕಾರ್, ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ, ಹೈಕೋರ್ಟ್ ಹಿರಿಯ ವಕೀಲ ಅಮಿತಕುಮಾರ ದೇಶಪಾಂಡೆ, ಕಲಬುರಗಿ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್‌ನ ನ್ಯಾಯವಾದಿ ಮಹಾದೇವಯ್ಯ ಕರದಳ್ಳಿ, ಆರ್.ವಿ. ಬಿಡಪ್ ಕಾನೂನು ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ವೀರಭದ್ರಪ್ಪ ಭುಯ್ಯಾ, ಶ್ರೀನಾಥ ನಾಗೂರೆ, ವಿಕಾಸ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಮುನಿಯಪ್ಪ ಟಿ. ಸ್ವಾಗತಿಸಿದರು. ಸಾಹಿಲ್ ಅಬ್ಬಾಸ್ ನಿರೂಪಿಸಿದರು. ಸಂತೋಷ್ ವಂದಿಸಿದರು.



