ಮೋದಿ ಸರ್ಕಾರದ ವೈಫಲ್ಯಗಳ ವಿರುದ್ಧ ದೇಶವ್ಯಾಪಿ ಕ್ರಾಂತಿ ಅಗತ್ಯ: ಭದ್ರೆ

ಕಲಬುರಗಿ, ಸೆ.11: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ದೇಶದಲ್ಲಿ ದೊಡ್ಡ ಪ್ರಮಾಣದ ಜನಾಂದೋಲನ ರೂಪುಗೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನಪರ ಸಂಘಟನೆಗಳು, ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು, ರೈತರು ಹಾಗೂ ಯುವಜನತೆ ಒಗ್ಗೂಡಿ ಸ್ವಾತಂತ್ರ್ಯ, ಸಂವಿಧಾನ, ಸೌಹಾರ್ದತೆ ಮತ್ತು ಜನರ ಸ್ವಾಭಿಮಾನಕ್ಕೆ ಪೂರಕವಾದ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕು ಎಂದರು.
ದೇಶದಲ್ಲಿ ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಹಾಗೂ ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ತಮ್ಮ ನಡೆ-ನುಡಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿರುವ ಗಣ್ಯರು ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
ಯುವಜನರ ಸಮಸ್ಯೆಗಳ ಬಗ್ಗೆ ಗಮನ ಅಗತ್ಯ
ದೇಶದ ಭವಿಷ್ಯವಾಗಿರುವ ಯುವಜನರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುವ ಪ್ರವೃತ್ತಿ ಸರಿಯಲ್ಲ. ನಿರುದ್ಯೋಗ, ಶಿಕ್ಷಣ ಹಾಗೂ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಬೇಕು ಎಂದು ಭದ್ರೆ ಆಗ್ರಹಿಸಿದರು.
ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರು ಹಾಗೂ ಟೀಕಿಸುವವರನ್ನು ದೇಶದ್ರೋಹಿಗಳು, ವಿದೇಶಿ ಏಜೆಂಟರು ಅಥವಾ ನಕ್ಸಲರು ಎಂದು ಬಿಂಬಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಭಿನ್ನಾಭಿಪ್ರಾಯವನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಸೂಕ್ತ ಉತ್ತರ ನೀಡುವ ಬದಲು ಟೀಕಾಕಾರರನ್ನೇ ಗುರಿಯಾಗಿಸುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದರು.
ರೈತರ ಸಮಸ್ಯೆ, ಯುವಜನರ ನಿರುದ್ಯೋಗ, ದೇಶದ ಆರ್ಥಿಕ ಪ್ರಗತಿ, ಮಣಿಪುರದಲ್ಲಿ ನಡೆದ ಹಿಂಸಾಚಾರ, ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆ, ದೆಹಲಿಯಲ್ಲಿ ಮುಸ್ಲಿಂ ಪತ್ರಕರ್ತರ ಮೇಲೆ ನಡೆದ ದಾಳಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೌನ ವಹಿಸುತ್ತಿದ್ದಾರೆ ಎಂದು ಭದ್ರೆ ಟೀಕಿಸಿದರು.
‘ದಲಿತರ ವಿರುದ್ಧದ ಘಟನೆಗಳು ಆತಂಕಕಾರಿ’
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದಲಿತರ ವಿರುದ್ಧ ಅವಮಾನಕಾರಿ ಹಾಗೂ ಅಸ್ಪೃಶ್ಯತೆಯಂತಹ ಘಟನೆಗಳು ನಡೆದಿವೆ ಎಂದು ಆರೋಪಿಸಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಆಹ್ವಾನಿಸದಿರುವುದು ಹಾಗೂ ರಾಮಮಂದಿರ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಸೇರಿದಂತೆ ಹಲವು ಘಟನೆಗಳನ್ನು ಪ್ರಸ್ತಾಪಿಸಿದರು.
ಸಂಸತ್‌ನ ಹೊಸ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿಯೂ ರಾಷ್ಟ್ರಪತಿಗೆ ಸೂಕ್ತ ಗೌರವ ನೀಡಲಾಗಿಲ್ಲ ಎಂದು ಅವರು ಆರೋಪಿಸಿದರು.
ರಾಷ್ಟ್ರಪತಿ ಭಾರತದ ಗಣರಾಜ್ಯದ ಸಂವಿಧಾನಾತ್ಮಕ ಮುಖ್ಯಸ್ಥರಾಗಿದ್ದು, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಅವರಿಗೆ ಗೌರವ ನೀಡಬೇಕು. ಆದರೆ ಪ್ರಸ್ತುತ ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ನಡೆ ಅನುಸರಿಸುತ್ತಿಲ್ಲ ಎಂದು ಭದ್ರೆ ದೂರಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದಲ್ಲಿ ಸಭೆ ನಡೆಸಿದ ಸ್ಥಳವನ್ನು ಅವಮಾನಿಸುವ ರೀತಿಯಲ್ಲಿ ನಡೆಸಿಕೊಂಡಿರುವುದು ಸೇರಿದಂತೆ ವಿವಿಧ ಘಟನೆಗಳು ದೇಶದ ರಾಜಕೀಯ ವಾತಾವರಣದ ಬಗ್ಗೆ ಆತಂಕ ಮೂಡಿಸಿವೆ ಎಂದರು.
‘ಸಾಮಾಜಿಕ ನ್ಯಾಯದ ಪರವಾಗಿ ಜನಾಂದೋಲನ ಅಗತ್ಯ’
ದೇಶದಲ್ಲಿ ಕೋಮು ಸಂಘರ್ಷ, ಭ್ರಷ್ಟಾಚಾರ, ಕಾರ್ಪೊರೇಟ್ ವಲಯದ ಸುಲಿಗೆ, ಮಹಿಳೆಯರ ಮೇಲಿನ ದೌರ್ಜನ್ಯ, ಯುವಜನರ ನಿರುದ್ಯೋಗ, ರೈತರ ಆತ್ಮಹತ್ಯೆ, ಕಾರ್ಮಿಕರ ಹಕ್ಕುಗಳ ಕುಸಿತ, ದಲಿತರ ಮೇಲಿನ ದೌರ್ಜನ್ಯ ಹಾಗೂ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಮುಂದುವರಿದಿವೆ ಎಂದು ಭದ್ರೆ ಹೇಳಿದರು.
ಈ ಸಮಸ್ಯೆಗಳ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ದೇಶವ್ಯಾಪಿ ಜನಾಂದೋಲನ ರೂಪಿಸುವ ಅಗತ್ಯವಿದೆ. ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



