1500 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ: ಸೆ.13ರಂದು ವಿತರಣೆ

ಕಲಬುರಗಿ, ಸೆ.11: ನಗರದ ಆಳಂದ ರಸ್ತೆಯ ಎಸ್‌ಬಿ ಕನ್ವೆನ್ಷನ್ ಹಾಲ್‌ನಲ್ಲಿ ಸೆ.13ರಂದು ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿ ಸೇವಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀರಾಮ್ ಸೇವಾ ಸಂಕಲ್ಪದ ರೀಜನಲ್ ಬಿಸಿನೆಸ್ ಹೆಡ್ ಹಾಗೂ ಶಾಖಾ ವ್ಯವಸ್ಥಾಪಕ ಮಧುಕಾಂತ್ ಜೆ. ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಸುಮಾರು 1,500 ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನದ ಸಾಧನೆಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
ಶ್ರೀಶೈಲಂ ಹಾಗೂ ಸುಲಫಲಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಶ್ರೀರಾಮ್ ಫೈನಾನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ್ ಮಠ್ ಅಧ್ಯಕ್ಷತೆ ವಹಿಸುವರು. ಬಳ್ಳಾರಿ ವಲಯದ ವ್ಯವಹಾರ ಮುಖ್ಯಸ್ಥ ಚನ್ನನಗೌಡ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಚಿವ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಡಾ. ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರ, ಶಶೀಲ್ ಜಿ. ನಮೋಶಿ, ಮಹಾಪೌರ ಶೇಖ್ ಅಜ್ಮಲ್ ಅಹ್ಮದ್ ಅಫೈಲ್ ಗೋಲಾ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಅಮರನಾಥ ಪಾಟೀಲ, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ಬಿ. ಪಾಟೀಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ, ರಸ್ತೆ ಸಾರಿಗೆ ಆಯುಕ್ತ ಸಿದ್ದಪ್ಪ ಎದಚಿ ಕಲ್ಲೂರು, ನಗರ ಉಪ ಪೊಲೀಸ್ ಆಯುಕ್ತೆ ಶಾಲೂ, ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ ಸೇರಿದಂತೆ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಧುಕಾಂತ್ ತಿಳಿಸಿದರು.
ಶಿಕ್ಷಣಕ್ಕೆ ಉತ್ತೇಜನ
ಶ್ರೀರಾಮ್ ಫೈನಾನ್ಸ್ ದೇಶದ ಪ್ರಮುಖ ಹಣಕಾಸು ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಸಾಮಾನ್ಯ ಜನರು, ಸಣ್ಣ ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ವಿವಿಧ ವರ್ಗದ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ. ವಾಹನ ಸಾಲ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಣಕಾಸು, ವೈಯಕ್ತಿಕ ಸಾಲ, ಹೂಡಿಕೆ ಸೇರಿದಂತೆ ವಿವಿಧ ಸೇವೆಗಳನ್ನು ಸಂಸ್ಥೆ ನೀಡುತ್ತಿದೆ ಎಂದು ಅವರು ಹೇಳಿದರು.
ವ್ಯವಹಾರದ ಜೊತೆಗೆ ಸಾಮಾಜಿಕ ಜವಾಬ್ದಾರಿಗೂ ಸಂಸ್ಥೆ ಆದ್ಯತೆ ನೀಡುತ್ತಿದ್ದು, ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಇದೇ ಸಾಮಾಜಿಕ ಬದ್ಧತೆಯ ಭಾಗವಾಗಿದೆ ಎಂದರು.
ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಂಚಾಕ್ಷರಪ್ಪ ಜೆ., ಮಧುಕಾಂತ್ ಜೆ., ನರಸಿಂಹರಾಜ ಶೆಟ್ಟಿ, ಮಲ್ಲಿಕಾರ್ಜುನ ಪಾಸೋಡಿ, ಶಂಕರಗೌಡ, ಸಂಜೀವಕುಮಾರ್ ಹೊಸಮನಿ, ಬಸವರಾಜ ಕುಂಟಿನ, ಮಹೇಶ್ ಜೇವರ್ಗಿ, ಸುನೀಲ್ ವಾಘಮೋಡೆ, ಜಗನ್ನಾಥ ಬುಜುರ್ಗ, ನಾಗೇಶ್, ಅಮರ ಕೊರೆ, ಗುರುರಾಜ ಚಿಂಚೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



