ಶರಣಬಸವೇಶ್ವರ ಕೆರೆ ಉಳಿಸಿ: ‘ಅಭಿವೃದ್ಧಿ ಹೆಸರಿನಲ್ಲಿ ಕೆರೆ ಹಾಳು ಮಾಡಬೇಡಿ’

ಕಲಬುರಗಿ, ಸೆ.11: ನಗರದ ಶರಣಬಸವೇಶ್ವರ ಕೆರೆಯನ್ನು ಯಾವುದೇ ಕಾರಣಕ್ಕೂ ಹಾಳು ಮಾಡದೆ ಸಂರಕ್ಷಿಸಬೇಕು. ಅಭಿವೃದ್ಧಿ ಮತ್ತು ಸೌಂದರ್ಯೀಕರಣದ ಹೆಸರಿನಲ್ಲಿ ಕೆರೆಯ ಸಹಜ ಪರಿಸರಕ್ಕೆ ಧಕ್ಕೆ ತರುವ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತ ಶರಣ್ ಐಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣಬಸವೇಶ್ವರ ಕೆರೆ ನಗರದ ಸುಮಾರು ಐದು ಕಿ.ಮೀ. ವ್ಯಾಪ್ತಿಯ ಜನರಿಗೆ ದಶಕಗಳಿಂದ ನೀರು, ತಂಪು ಹಾಗೂ ಪರಿಸರವನ್ನು ಒದಗಿಸುತ್ತ ಬಂದಿದೆ. ಇದು ಕೇವಲ ಕೆರೆಯಲ್ಲ, ನಗರದ ಉಸಿರು ಮತ್ತು ಹೆಮ್ಮೆ ಎಂದರು.
ಹಿಂದೆಯೂ ಕೆರೆಯನ್ನು ಮುಚ್ಚಿ ನುಂಗುವ ಪ್ರಯತ್ನಗಳು ನಡೆದಾಗ ಕಲಬುರಗಿ ಜನರ ಹೋರಾಟ ಹಾಗೂ ಕೆಲವು ನಿಷ್ಠಾವಂತ ಅಧಿಕಾರಿಗಳ ಧೈರ್ಯದಿಂದ ಕೆರೆ ಉಳಿದಿತ್ತು. ಆದರೆ ಇದೀಗ ಮತ್ತೆ ಕೆರೆಗೆ ಅಪಾಯ ಎದುರಾಗಿದೆ. ಈ ಬಾರಿ ಅಪಾಯ ಹೊರಗಿನವರಿಂದಲ್ಲ, ಅಧಿಕಾರಿಗಳಿಂದಲೇ ಎದುರಾಗಿದೆ ಎಂದು ಅವರು ಆರೋಪಿಸಿದರು.
ವಿರೋಧ ಪಕ್ಷದಲ್ಲಿದ್ದಾಗ ಕೆರೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಧ್ವನಿ ಎತ್ತುತ್ತಿದ್ದವರು ಅಧಿಕಾರಕ್ಕೆ ಬಂದ ಬಳಿಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಶರಣ್ ಐಟಿ ದೂರಿದರು.
‘ನಿಯಮ ಉಲ್ಲಂಘಿಸಿ ಕಾಮಗಾರಿ’
ಸೌಂದರ್ಯೀಕರಣದ ಹೆಸರಿನಲ್ಲಿ ಸಿಮೆಂಟ್ ಡೆಕ್ಗಳ ಮೇಲೆ ಸಾರ್ವಜನಿಕರಿಗೆ ವಿಶ್ರಾಂತಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳಿಗೆ ವಿರುದ್ಧವಾಗಿ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ಕೆರೆಯ ಸಹಜ ಪರಿಸರ ಹಾಳಾಗುವುದಲ್ಲದೆ, ಸಾರ್ವಜನಿಕರ ತೆರಿಗೆ ಹಣವೂ ವ್ಯರ್ಥವಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು.
ಕೆರೆಯ ತಜ್ಞರ ತಂಡವೇ ಕಾಮಗಾರಿಗಳನ್ನು ವಿರೋಧಿಸಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದು ಗಂಭೀರ ವಿಚಾರ. ತಜ್ಞರು ವಿರೋಧ ವ್ಯಕ್ತಪಡಿಸಿ ಹೊರನಡೆದಿರುವಾಗಲೂ ಸರ್ಕಾರ ಮತ್ತು ಅಧಿಕಾರಿಗಳು ಯಾರ ಹಿತಕ್ಕಾಗಿ ಈ ಕಾಮಗಾರಿಗಳನ್ನು ಮುಂದುವರಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಿಂದ ವರದಿ ಪಡೆದು ಅದನ್ನು ಬಹಿರಂಗಪಡಿಸದೆ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ತಜ್ಞರ ವರದಿಯ ಆಧಾರದ ಮೇಲೆ ನಿಯಮಬಾಹಿರ ಡೆಕ್ಗಳನ್ನು ತಕ್ಷಣ ತೆರವುಗೊಳಿಸಿ ಕೆರೆಯ ಸಹಜ ಪರಿಸರವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
‘ನ್ಯಾಯಾಲಯದ ಮೊರೆ ಹೋಗಿದ್ದೇವೆ’
ಈ ವಿಚಾರವಾಗಿ ಈಗಾಗಲೇ ನ್ಯಾಯಾಲಯದ ಮೊರೆ ಹೋಗಲಾಗಿದೆ. ಮುಖ್ಯಮಂತ್ರಿ ಅಧಿಕಾರಕ್ಕೆ ಬಂದು ನೂರು ದಿನ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಶರಣಬಸವೇಶ್ವರ ಕೆರೆಯನ್ನು ಉಳಿಸಿಕೊಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ಕೆಲ ಅಧಿಕಾರಿಗಳ ಕುತಂತ್ರದಿಂದ ಸರ್ಕಾರದ ಹಾಗೂ ಮುಖ್ಯಮಂತ್ರಿಗಳ ಉತ್ತಮ ಹೆಸರಿಗೆ ಧಕ್ಕೆ ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳು ಜನರೊಂದಿಗೆ ಬೆರೆತು ‘ಪ್ರಜಾಸೇವೆ’ ಹೆಸರಿನಲ್ಲಿ ಆಡಳಿತಕ್ಕೆ ಹೊಸ ಭರವಸೆ ಮೂಡಿಸುತ್ತಿರುವ ಸಂದರ್ಭದಲ್ಲಿ ಕೆರೆ ಸಂರಕ್ಷಣೆಯ ವಿಷಯದಲ್ಲಿಯೂ ಜನಪರ ನಿಲುವು ತೆಗೆದುಕೊಳ್ಳಬೇಕು. ಕೆರೆ ಕಬಳಿಕೆಗೆ ಅವಕಾಶ ನೀಡದೆ ಹೊಸ ಗ್ಯಾರಂಟಿ ನೀಡಬೇಕು ಎಂದು ಶರಣ್ ಐಟಿ ಒತ್ತಾಯಿಸಿದರು.
ಕೆರೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳು ಹಾಗೂ ಉಪಾಧ್ಯಕ್ಷರಾಗಿರುವ ಡಾ. ಅಜಯ್ ಸಿಂಗ್ ಅವರಿಂದ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
‘ಕೆರೆ ಒಣಗಿಸುವ ಯೋಜನೆ ಬೇಡ’
ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಲ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಕೆರೆ ಕಬಳಿಕೆಗೆ ಮುಂದಾಗಬಾರದು ಎಂದು ಮನವಿ ಮಾಡಿದರು.
ಕೆರೆಯ ಸಂರಕ್ಷಣೆಗೆ ಸಂಬಂಧಿಸಿದ ಸಮಿತಿಯ ಹಲವು ಸದಸ್ಯರು ಕಾಮಗಾರಿಗಳನ್ನು ವಿರೋಧಿಸಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮುಖ್ಯಮಂತ್ರಿ, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ಕೆರೆಯನ್ನು ಉಳಿಸಬೇಕು. ಕಾನೂನು ಹೋರಾಟ ನಡೆಸುವುದು ನಮಗೆ ಉಳಿದಿರುವ ಏಕೈಕ ಮಾರ್ಗ ಎಂದು ಹೇಳಿದರು.
ನಗರಕ್ಕೆ ನೀರು ಪೂರೈಸುವ ಸರ್ಜಾಪುರ ಬ್ಯಾರೇಜ್ನ ಕಳಪೆ ಕಾಮಗಾರಿಯಿಂದ ಕೆರೆಗೆ ಎರಡು ಬಾರಿ ತುಂಬುವಷ್ಟು ನೀರು ವ್ಯರ್ಥವಾಗಿದೆ. ಈ ನೀರು ಸೋರಿಕೆಗೆ ಯಾರು ಹೊಣೆ ಎಂಬುದಕ್ಕೆ ಸಣ್ಣ ನೀರಾವರಿ ಸಚಿವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ₹5 ಕೋಟಿ ವೆಚ್ಚ ಮಾಡಿರುವುದಾಗಿ ಹೇಳಲಾಗಿದ್ದು, ಮತ್ತೆ ₹1 ಕೋಟಿ ವೆಚ್ಚ ಮಾಡುವುದಾಗಿ ಹೇಳಲಾಗುತ್ತಿದೆ. ಪದೇಪದೇ ಹಣ ಖರ್ಚು ಮಾಡಿ ಕೆರೆಯ ಬಫರ್ಝೋನ್ ನಿಯಮಗಳನ್ನು ಉಲ್ಲಂಘಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.
ಸೌಂದರ್ಯೀಕರಣದ ಹೆಸರಿನಲ್ಲಿ ಹಿಂದಿನ ಶಾಸಕರು ಮಾಡಿದ್ದ ಕಾಮಗಾರಿಯನ್ನೇ ಟೀಕಿಸಿ ಮತ್ತೆ ಅದೇ ರೀತಿಯ ಕಾಮಗಾರಿ ನಡೆಸುವುದು ಎಷ್ಟು ಸರಿ? ಕೆರೆಯ ಸಂರಕ್ಷಣೆ ಮುಖ್ಯವೇ ಹೊರತು, ಪದೇಪದೇ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕ ಹಣ ಖರ್ಚು ಮಾಡುವುದು ಸರಿಯಲ್ಲ ಎಂದು ಶರಣ್ ಐಟಿ ಹೇಳಿದರು.



