ಜಿಲ್ಲಾಸುದ್ದಿ

ಆಧಾರ್ ಕಾರ್ಡ್ ತಿದ್ದುಪಡಿಗೆ ಹೆಚ್ಚುವರಿ ಕೇಂದ್ರ ಆರಂಭಕ್ಕೆ ಆಗ್ರಹ

ಜೇವರ್ಗಿ, ಸೆ.23: ಆಧಾರ್ ಕಾರ್ಡ್‌ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಜೇವರ್ಗಿಯಲ್ಲಿ ಹೆಚ್ಚುವರಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸಿದ್ದರಾಮಯ್ಯ ಕಟ್ಟೆ ಆಗ್ರಹಿಸಿದರು.

ತಾಲ್ಲೂಕಿನ ವಿಧಾನಸೌಧದ ಕೆಳಮಹಡಿಯಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ ಸೇರಿದಂತೆ ವಿವಿಧ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಆಗಮಿಸುತ್ತಿದ್ದಾರೆ. ಆದರೆ ಎರಡೂ ತಾಲ್ಲೂಕುಗಳಿಗೆ ಕೇವಲ ಎರಡು ಆಧಾರ್ ತಿದ್ದುಪಡಿ ಕೇಂದ್ರಗಳಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.

ಜೇವರ್ಗಿ ವಿಧಾನಸೌಧದಲ್ಲಿ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ಕೇಂದ್ರ ಜೇವರ್ಗಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ಎದುರು ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಕೇಂದ್ರದಲ್ಲಿ ಆಧಾರ್ ತಿದ್ದುಪಡಿಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ಸಿದ್ದರಾಮಯ್ಯ ಕಟ್ಟೆ ತಿಳಿಸಿದರು.

ಪ್ರತಿದಿನ ನೂರಾರು ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ರಜೆ ಹಾಕಿ, ಪಾಲಕರೊಂದಿಗೆ ಆಧಾರ್ ತಿದ್ದುಪಡಿಗಾಗಿ ಕೇಂದ್ರಗಳಿಗೆ ಆಗಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ದಿನದಲ್ಲಿ ಕೆಲಸ ಪೂರ್ಣಗೊಳ್ಳದ ಕಾರಣ ಕೆಲವರು ಎರಡು-ಮೂರು ದಿನಗಳ ಕಾಲ ಸತತವಾಗಿ ಅಲೆದಾಡಬೇಕಾಗಿದೆ. ಇದರಿಂದ ಸಾರ್ವಜನಿಕರಿಗೆ ಅನಗತ್ಯ ಸಮಯ ಹಾಗೂ ಹಣದ ವ್ಯಯವಾಗುತ್ತಿದೆ ಎಂದು ಅವರು ಹೇಳಿದರು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಾಲ್ಲೂಕಿನ ಶಾಸಕರು ಹಾಗೂ ನೂತನ ಸಚಿವ ಡಾ. ಅಜಯ್‌ಸಿಂಗ್ ಧರ್ಮಸಿಂಗ್ ಅವರು ಕ್ರಮ ಕೈಗೊಳ್ಳಬೇಕು. ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೆಚ್ಚುವರಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಯಡ್ರಾಮಿ ತಾಲ್ಲೂಕಿನ ಇಜೇರಿ, ಅರಳಗುಂಡಗಿ ಹಾಗೂ ಮಳ್ಳಿ ಗ್ರಾಮಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಿದರೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅದೇ ರೀತಿ ಜೇವರ್ಗಿ ತಾಲ್ಲೂಕಿನ ನೆಲೋಗಿ, ಆಂದೋಲ, ಮಂದೇವಾಲ ಹಾಗೂ ಕೊಳಕೂರ ಹೋಬಳಿಗೆ ತಲಾ ಒಂದು ಆಧಾರ್ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ತಹಶೀಲ್ದಾರ್ ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಕಟ್ಟೆ ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button