ನ್ಯೂಯಾರ್ಕ್ನಲ್ಲಿ 27 ವರ್ಷದ ಭಾರತೀಯ ಯುವಕ ಗುಂಡಿಕ್ಕಿ ಹತ್ಯೆ
ಎದೆಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯದ ಗುರ್ದೀಪ್ ಸಿಂಗ್; ಆರೋಪಿಗಾಗಿ ತನಿಖೆ ಮುಂದುವರಿಕೆ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 27 ವರ್ಷದ ಭಾರತೀಯ ಮೂಲದ ಯುವಕನೊಬ್ಬನನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಕ್ವೀನ್ಸ್ ನಿವಾಸಿ ಗುರ್ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಈಸ್ಟ್ ನ್ಯೂಯಾರ್ಕ್ ಪ್ರದೇಶದ ಸ್ಟ್ಯಾನ್ಲಿ ಅವೆನ್ಯೂ ಸಮೀಪ ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಘಟನೆ ನಡೆದಿದೆ. ವಾಗ್ವಾದದ ಬಳಿಕ ಗುಂಡಿನ ದಾಳಿ ನಡೆದಿದ್ದು, ಗುರ್ದೀಪ್ ಸಿಂಗ್ ಅವರ ಎದೆಗೆ ಗುಂಡು ತಗುಲಿತ್ತು.
ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿ ಪತ್ತೆಯಾಗಿದ್ದರು. ತುರ್ತು ವೈದ್ಯಕೀಯ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಳಿಕ ಶಂಕಿತ ವ್ಯಕ್ತಿ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾನೆ. ಸಿಬಿಎಸ್ ನ್ಯೂಸ್ಗೆ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿದ್ದು, ಬಳಿಕ ಬೆಳಕಿನ ಮಿಂಚಿನಂತೆ ಕಾಣುವ ದೃಶ್ಯ ದಾಖಲಾಗಿದೆ. ನಂತರ ಓರ್ವ ವ್ಯಕ್ತಿ ನೆಲಕ್ಕೆ ಬಿದ್ದಿದ್ದು, ಮತ್ತೊಬ್ಬ ಕಾರಿನಲ್ಲಿ ಪರಾರಿಯಾಗಿರುವುದು ದೃಶ್ಯದಲ್ಲಿದೆ ಎಂದು ವರದಿಯಾಗಿದೆ.
ಪೊಲೀಸರು ಶನಿವಾರ ಬೆಳಗ್ಗೆಯವರೆಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕ್ಷ್ಯಾಧಾರಗಳಿಗಾಗಿ ಶೋಧ ನಡೆಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಗುಂಡಿನ ದಾಳಿಯ ನಿಖರ ಕಾರಣ ಹಾಗೂ ಹತ್ಯೆಯ ಹಿಂದಿನ ಉದ್ದೇಶದ ಕುರಿತು ತನಿಖೆ ಮುಂದುವರಿದಿದೆ.
ಘಟನಾ ಸ್ಥಳದ ಸಮೀಪ ಕೆಲಸ ಮಾಡುವ ಆಂಥನಿ ಸ್ಯಾಂಟೋಸ್, ಈ ಘಟನೆ ತಮ್ಮನ್ನು ಆಘಾತಕ್ಕೊಳಪಡಿಸಿದ್ದು, ಭಯವೂ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಪಂಜಾಬಿ ಸಂಘದಿಂದ ಸಂತಾಪ
ಅಮೆರಿಕ ಮೂಲದ ನಾರ್ತ್ ಅಮೆರಿಕನ್ ಪಂಜಾಬಿ ಅಸೋಸಿಯೇಷನ್ (NAPA) ಗುರ್ದೀಪ್ ಸಿಂಗ್ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದು, ಘಟನೆ ಕುರಿತು ತೀವ್ರ ಕಳವಳ ಹೊರಹಾಕಿದೆ.
ಒಂದು ದಶಕಕ್ಕೂ ಹೆಚ್ಚು ಸಮಯದ ಹಿಂದೆ ಅಮೆರಿಕಕ್ಕೆ ತೆರಳಿದ್ದ ಗುರ್ದೀಪ್ ಸಿಂಗ್ ಅವರ ಹತ್ಯೆಯನ್ನು ಪ್ರತ್ಯೇಕ ಘಟನೆಯಾಗಿ ಪರಿಗಣಿಸಬಾರದು ಎಂದು NAPA ಕಾರ್ಯನಿರ್ವಾಹಕ ನಿರ್ದೇಶಕ ಸತ್ನಾಮ್ ಸಿಂಗ್ ಚಹಲ್ ಹೇಳಿದ್ದಾರೆ.
ಯುವ ಪಂಜಾಬಿ ಅಥವಾ ಸಿಖ್ ವ್ಯಕ್ತಿಯೊಬ್ಬರು ಹತ್ಯೆಯಾದಾಗ ಒಂದು ಕುಟುಂಬವೇ ನಾಶವಾಗುತ್ತದೆ. ಇಂತಹ ಹಿಂಸಾಚಾರವನ್ನು ಸಮುದಾಯ ಸಹಜವೆಂದು ಒಪ್ಪಿಕೊಳ್ಳುವ ಪರಿಸ್ಥಿತಿ ಬರಬಾರದು ಎಂದು ಅವರು ಹೇಳಿದ್ದಾರೆ.
ಹತ್ಯೆಯ ಹಿಂದಿನ ನಿಖರ ಉದ್ದೇಶವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಬೇಕು ಹಾಗೂ ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದು NAPA ಒತ್ತಾಯಿಸಿದೆ.



