ಅಂತರರಾಷ್ಟ್ರೀಯ

ಮದುವೆಗೆ ಎರಡು ತಿಂಗಳು ಬಾಕಿ ಇರುವಾಗಲೇ ರಷ್ಯಾ ಕ್ಷಿಪಣಿ ದಾಳಿಗೆ ಕೇರಳದ ನಾವಿಕ ಬಲಿ

ಒಡೆಸಾ ಬಂದರು ಸಮೀಪದ ದಾಳಿಯಲ್ಲಿ ಭಾರತೀಯ ನಾವಿಕ ಅಖಿಲ್ ಜೋಯನ್ ಸೇರಿದಂತೆ ನಾಲ್ವರು ಮೃತಪಟ್ಟರು; ಕೇಂದ್ರ ಸರ್ಕಾರದ ತೀವ್ರ ಖಂಡನೆ

ಉಕ್ರೇನ್‌ನ ಒಡೆಸಾ ಬಂದರು ಸಮೀಪ ವಾಣಿಜ್ಯ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ನಾಲ್ವರು ಭಾರತೀಯ ನಾವಿಕರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಅಖಿಲ್ ಜೋಯನ್ (26) ಕೂಡ ಸೇರಿದ್ದಾರೆ. ಇನ್ನೆರಡು ತಿಂಗಳಲ್ಲಿ ವಿವಾಹವಾಗಬೇಕಿದ್ದ ಅವರ ಅಕಾಲಿಕ ಸಾವಿನಿಂದ ಕುಟುಂಬ ಹಾಗೂ ಊರು ದುಃಖದ ಮಡುವಿನಲ್ಲಿ ಮುಳುಗಿದೆ.

ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡು ಮೂಲದ ಅಖಿಲ್ ಜೋಯನ್ ಗಿನಿ-ಬಿಸ್ಸೌ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಒಟ್ಟು 10 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಅಖಿಲ್ ಸೇರಿದಂತೆ ನಾಲ್ವರು ಭಾರತೀಯ ನಾವಿಕರು ಸೇರಿದ್ದಾರೆ. ಮತ್ತೋರ್ವ ಭಾರತೀಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಖಿಲ್ ಅವರಿಗೆ ಮೂರು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದು, ಅಲಪ್ಪುಳ ಜಿಲ್ಲೆಯ ಯುವತಿಯೊಂದಿಗೆ ಇನ್ನೆರಡು ತಿಂಗಳಲ್ಲಿ ವಿವಾಹ ನಿಗದಿಯಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರು ಮತ್ತೆ ಕರ್ತವ್ಯಕ್ಕೆ ಮರಳಿದ್ದರು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.

ಅಖಿಲ್ 19ನೇ ವಯಸ್ಸಿನಲ್ಲೇ ಮರ್ಚೆಂಟ್ ನೆವಿಗೆ ಸೇರಿದ್ದರು. ಅವರ ತಂದೆ ವಿದ್ಯುತ್ ಸಾಮಗ್ರಿಗಳ ಅಂಗಡಿ ನಡೆಸುತ್ತಿದ್ದರೆ, ತಾಯಿ ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಹೊಸ ಮನೆ ನಿರ್ಮಿಸಿದ್ದ ಕುಟುಂಬವು ತಮ್ಮ ಏಕೈಕ ಮಗನ ಮೇಲೆಯೇ ಹೆಚ್ಚಿನ ನಿರೀಕ್ಷೆ ಇಟ್ಟಿತ್ತು.

ಅಖಿಲ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಸ್ಥಳೀಯ ಸಂಸದ ಹಾಗೂ ಶಾಸಕರ ನೆರವು ಕೋರಿದ್ದಾರೆ. ಸೋಮವಾರ ಸಂಜೆ ಕಂಪನಿಯ ಇ-ಮೇಲ್ ಮೂಲಕ ಸಾವಿನ ಮಾಹಿತಿ ಕುಟುಂಬಕ್ಕೆ ತಲುಪಿದೆ.

ಈ ಹಡಗನ್ನು ಮುಂಬೈ ಮೂಲದ ಓಷನ್ ಗ್ರೇಸ್ ಶಿಪ್ಪಿಂಗ್ ಲಿಮಿಟೆಡ್ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.

ಕೇರಳ ಮುಖ್ಯಮಂತ್ರಿ ಕಚೇರಿ, ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆ (ನೋರ್ಕಾ)ಗೆ ರಷ್ಯಾ ರಾಯಭಾರ ಕಚೇರಿ ಹಾಗೂ ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಮಾಹಿತಿ ಸಂಗ್ರಹಿಸಲು ಸೂಚಿಸಿದೆ.

ಈ ಘಟನೆಯನ್ನು ಭಾರತದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು, ನಿರಪರಾಧ ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ಸಮುದ್ರ ವ್ಯಾಪಾರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಖಂಡನೀಯ ಎಂದು ಸಚಿವಾಲಯ ಹೇಳಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

Back to top button