ಜಿಲ್ಲಾಸುದ್ದಿ

ರಾಯಚೂರಿನಲ್ಲಿ ಮೂವರು ದಲಿತರ ಕೊಲೆ, ಅತ್ಯಾಚಾರ ಖಂಡಿಸಿ ಪ್ರತಿಭಟನೆ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ, ಸೆ.2- ರಾಯಚೂರು ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂವರು ದಲಿತರ ಕೊಲೆ ಹಾಗೂ ಅತ್ಯಾಚಾರ ನಡೆದಿರುವ ಘಟನೆಗಳನ್ನು ಖಂಡಿಸಿ ಬುಧವಾರ ನಗರದಲ್ಲಿ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ದಶರಥ ಎಂ. ಕಲಗುರ್ತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಜಿನಕೇರಿ, ರಾಜು ಕಟ್ಟಿಮನಿ, ರಮೇಶ್ ವಾಡೇಕರ್, ಸಚಿನ್ ಕಟ್ಟಿಮನಿ, ರಂಜಿತ್‌ಕುಮಾರ್ ಮೂಲಿಮನಿ, ಬಂಡೇಶ ರೊಟ್ಟನಗಿ, ಮಲ್ಲಿಕಾರ್ಜುನ ಸರಡಗಿ, ಗುರುರಾಜ ಭಂಡಾರಿ, ರಮಾಕಾಂತ ಪೂಜಾರಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತ ಜನರ ಮೇಲೆ ಹಲ್ಲೆ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ರಾಯಚೂರು ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಎರಡು ಕೊಲೆ ಹಾಗೂ ಒಂದು ಅತ್ಯಾಚಾರ ಪ್ರಕರಣ ನಡೆದಿದ್ದು, ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ 4ರಂದು ಭೂಮಾನಂದ ಅವರ ಕೊಲೆ, 20ರಂದು ಅಶ್ವಿನಿ ಎಂಬ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಹಾಗೂ 28ರಂದು ಮಾನ್ವಿ ತಾಲೂಕಿನ ಹುಸೇನಪುರ ಕ್ರಾಸ್ ಬಳಿಯ ಭತ್ತದ ಗದ್ದೆಯಲ್ಲಿ ಭತ್ತದ ಗದ್ದೆಂ ಎಂಬುವವರ ಕೊಲೆ ನಡೆದಿರುವುದನ್ನು ಪ್ರತಿಭಟನಾಕಾರರು ಉಲ್ಲೇಖಿಸಿದರು. ಕೊಲೆಯಾದವರು ದಲಿತ ಮುಖಂಡರಾಗಿದ್ದರು ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೆಲವು ದಲಿತಪರ ಸಂಘಟನೆಗಳು ಆಡಳಿತ ಪಕ್ಷದ ಪರವಾಗಿ ಗುಲಾಮರಂತೆ ನಡೆದುಕೊಳ್ಳುತ್ತಿವೆ. ಆದರೆ ನೊಂದ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಹಾಗೂ ಇಂದಿನ ದಲಿತ ಸಂಘಟನೆಗಳ ಹೋರಾಟದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಹಿಂದೆ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿದಾಗ ಮುಖ್ಯಮಂತ್ರಿಗಳ ಕುರ್ಚಿಯೂ ಅಲುಗಾಡುತ್ತಿತ್ತು. ಆದರೆ ಈಗಿನ ಕೆಲವು ದಲಿತ ಸಂಘಟನೆಗಳು ಒಂದು ಪಕ್ಷದ ನಾಯಕರ ಪರವಾಗಿ ಧ್ವನಿ ಎತ್ತುವುದನ್ನು ಬಿಟ್ಟು, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.

ರಾಜಕೀಯ ಕುತಂತ್ರದಿಂದಾಗಿ ದಲಿತ ಸಂಘಟನೆಗಳ ಒಗ್ಗಟ್ಟು ದುರ್ಬಲವಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂಘಟನೆಗಳು ಒಗ್ಗೂಡಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡು ಸಂಘಟನೆ ಕಟ್ಟಿಕೊಂಡು ಒಂದು ಪಕ್ಷದ ಗುಲಾಮರಂತೆ ವರ್ತಿಸುತ್ತಿರುವುದರಿಂದಲೇ ದಲಿತರ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ದಲಿತರ ಪರ ಧ್ವನಿ ಎತ್ತುವ ಧೈರ್ಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button