ಮೇಯರ್ ಆಯ್ಕೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ: ದಿವ್ಯಾ ಹಗರಗಿ ಆರೋಪ

ಕಲಬುರಗಿ, ಸೆ.2- ಮಹಾನಗರ ಪಾಲಿಕೆಯ ನೂತನ ಮೇಯರ್ ಮೊಹಮ್ಮದ್ ಅಜ್ಮಲ್ ಗೋಲಾ ಅವರ ವಿರುದ್ಧ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಅವರ ಮೇಯರ್ ಆಯ್ಕೆಯ ಹಿಂದೆ ಪ್ರಬಲ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಮಾಜಿ ಕಾಂಗ್ರೆಸ್ ಕಾರ್ಯಕರ್ತೆ ಶ್ರೀಮತಿ ದಿವ್ಯಾ ಹಗರಗಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಮೇ 10ರಂದು ನಡೆದ ಪ್ರಕರಣವೊಂದರಲ್ಲಿ ನೂತನ ಮೇಯರ್ ಅಜ್ಮಲ್ ಗೋಲಾ ಅವರು ಪ್ರಮುಖ ಆರೋಪಿಯಾಗಿದ್ದಾರೆ ಎಂದು ಹೇಳಿದರು. ಅವರೊಂದಿಗೆ ಸಿಖಂದರ್ ಅಫ್ಸರ್ ಖುರೇಶಿ, ಫಿರೋಜ್ ಅಫ್ಸರ್ ಖುರೇಶಿ, ಮೊಯಿನ್ ಸಾದರ್ ಸೇರಿದಂತೆ ಐವರ ವಿರುದ್ಧ ಮೊಹಮ್ಮದ್ ನಸೀರುದ್ದೀನ್ ಮತ್ತು ಮೊಹಮ್ಮದ್ ನಜೀರುದ್ದೀನ್ ಜಮಾನದೂರು ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಹಾಗೂ ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಒಟ್ಟು ಎರಡು ಪ್ರಕರಣಗಳು ದಾಖಲಾಗಿದ್ದರೂ ಅಜ್ಮಲ್ ಗೋಲಾ ಅವರಿಗೆ ಮೇಯರ್ ಸ್ಥಾನ ನೀಡಲಾಗಿದೆ. ಇದಕ್ಕೆ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ರಾಜ್ಯದ ಗೃಹ, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವೆ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರೇ ಪ್ರಮುಖ ಕಾರಣ ಎಂದು ದಿವ್ಯಾ ಹಗರಗಿ ಆರೋಪಿಸಿದರು.
ಇತರರ ಕ್ರಿಮಿನಲ್ ಹಿನ್ನೆಲೆಯ ಕುರಿತು ಮಾತನಾಡುವ ಗೃಹ ಸಚಿವರು, ತಮ್ಮದೇ ಪಕ್ಷದ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗೆ ಮೇಯರ್ ಸ್ಥಾನ ನೀಡಿರುವುದನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ ಅವರು, ಇಂತಹ ವ್ಯಕ್ತಿಯಿಂದ ಮಹಾನಗರ ಪಾಲಿಕೆಯಲ್ಲಿ ಉತ್ತಮ ಆಡಳಿತ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಮೇಯರ್ ಸ್ಥಾನ ನೀಡಿರುವುದು ಖಂಡನೀಯ. ಮಹಾನಗರ ಪಾಲಿಕೆಗೆ ಸಮರ್ಥ ಹಾಗೂ ಉತ್ತಮ ಆಡಳಿತ ನೀಡಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿತ್ತು. ಆದರೆ ರಾಜಕೀಯ ಪ್ರಭಾವದಿಂದ ಇಂತಹ ಆಯ್ಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.



