ಕ್ರಿಮಿನಲ್ ಆರೋಪಿ ನೇಮಕಕ್ಕೆ ವಿರೋಧ: ಆಡಕಿ ಟೋಲ್ಗೇಟ್ ಸೆ.10ರಂದು ಬಂದ್ ಪ್ರತಿಭಟನೆ

ಕಲಬುರಗಿ, ಸೆ.2- ವಾಗ್ದರಿ-ರೆಬ್ಬನಪಳ್ಳಿ ಟೋಲ್ ವೇ ರಸ್ತೆಯ ಸೇಡಂ ತಾಲೂಕಿನ ಆಡಕಿ ಟೋಲ್ಗೇಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರ ವಿರುದ್ಧ ಹಲವು ಕ್ರಿಮಿನಲ್ ಹಾಗೂ ಅತ್ಯಾಚಾರದಂತಹ ಗಂಭೀರ ಪ್ರಕರಣಗಳ ಆರೋಪವಿದ್ದು, ಕಾನೂನುಬಾಹಿರವಾಗಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೂಡಲೇ ಆ ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 10ರಂದು ಟೋಲ್ಗೇಟ್ ಬಂದ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಜಾಶಕ್ತಿ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೌನೇಶ್ ಕೆ. ಬಡಿಗೇರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಹೊಂದಿರುವ ವ್ಯಕ್ತಿಯನ್ನು ಟೋಲ್ ನಿರ್ವಹಣಾ ಸಂಸ್ಥೆ ಯಾವುದೇ ನಿಯಮಗಳನ್ನು ಪಾಲಿಸದೆ ನೇಮಕ ಮಾಡಿಕೊಂಡಿದೆ ಎಂದು ಆರೋಪಿಸಿದರು. ಈ ಕುರಿತು ಕೂಡಲೇ ಕ್ರಮ ಕೈಗೊಂಡು ಸಂಬಂಧಪಟ್ಟ ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಟೋಲ್ ನಿರ್ವಹಣಾ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಹಾಳಾಗಿರುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ವಾಗ್ದರಿ-ರೆಬ್ಬನಪಳ್ಳಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿ ಮಾಡದೆ ವಾಹನ ಸವಾರರಿಂದ ಟೋಲ್ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಒಂದು ವಾರದ ಹಿಂದೆಯೇ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸೆಪ್ಟೆಂಬರ್ 10ರಂದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೆ ಎರಡೂ ಕಡೆಗಳ ಟೋಲ್ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಭುಲಿಂಗ ನಾಟೀಕಾರ್, ಹಣಮಂತ ದೊಡ್ಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



