ಜಿಲ್ಲಾಸುದ್ದಿ

ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ಎಕರೆಗೆ ₹30 ಸಾವಿರ ಪರಿಹಾರಕ್ಕೆ ಮೇಘಪ್ಪಿ ಆಗ್ರಹ

ಕಲಬುರಗಿ, ಸೆ.2- ಕೂಡಲೇ ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಪ್ರತಿ ಎಕರೆಗೆ ₹30 ಸಾವಿರ ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ರೈತ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಎಸ್. ಮೇಘಪ್ಪಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲನೇ ಮತ್ತು ಎರಡನೇ ಕಂತಿನ ಹಣ ಕ್ರಮವಾಗಿ ₹221 ಕೋಟಿ ಹಾಗೂ ₹54 ಕೋಟಿ ಪಾವತಿಯಾಗಬೇಕಿದ್ದು, ಇದೇ ರೀತಿಯಲ್ಲಿ ಮೂರನೇ ಕಂತಿನ ₹62 ಕೋಟಿ ಹಣವನ್ನು ತ್ವರಿತವಾಗಿ ರೈತರಿಗೆ ಪಾವತಿಸಬೇಕು. ಅಲ್ಲದೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ನಿರ್ಲಕ್ಷಿಸಿರುವುದು ಖಂಡನೀಯ. ಕೂಡಲೇ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಉದ್ದು, ಹೆಸರು, ಸಜ್ಜೆ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳು ಶೇ.84ರಷ್ಟು ಬಿತ್ತನೆಯಾಗಿದ್ದರೂ ಸಂಪೂರ್ಣವಾಗಿ ನಷ್ಟವಾಗಿವೆ. ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿ 6.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ 5.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಅಂದರೆ ಶೇ.84.78ರಷ್ಟು ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ ಬಹುತೇಕ ಬೆಳೆಗಳು ಮಳೆಯ ಅಭಾವದಿಂದ ಒಣಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯ ಶೇ.90.92ರಷ್ಟು ಪ್ರದೇಶ ಮಳೆಯಾಶ್ರಿತ ಬೆಳೆಗಳನ್ನು ಒಳಗೊಂಡಿದೆ. ಕಳೆದ ಜೂನ್ 1ರಿಂದ ಇಲ್ಲಿಯವರೆಗೆ ವಾಡಿಕೆಯಂತೆ 401.3 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಕೇವಲ 223.4 ಮಿ.ಮೀ. ಮಳೆಯಾಗಿದ್ದು, ಶೇ.44ರಷ್ಟು ಮಳೆ ಕೊರತೆಯಾಗಿದೆ ಎಂದು ಮೇಘಪ್ಪಿ ತಿಳಿಸಿದರು.

ಜಿಲ್ಲೆಯಲ್ಲಿ ಒಣಹವೆ ಮುಂದುವರಿದಿದ್ದು, ಬೆಳೆಗಳು ಒಣಗುತ್ತಿವೆ. ಬಹಳಷ್ಟು ರೈತರು ಮರುಬಿತ್ತನೆಯನ್ನೂ ಮಾಡಿದ್ದಾರೆ. ಆದರೆ ಮತ್ತೆ ಮಳೆ ಬಾರದ ಕಾರಣ ಮೊಳಕೆಯಲ್ಲಿಯೇ ಬೆಳೆಗಳು ಕಮರುತ್ತಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಕೂಡಲೇ ಮರು ಪರಿಶೀಲನೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಬೇಕು. ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದಲ್ಲಿ ರೈತರು ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸದಾಶಿವ ಹೊನ್ನಕಿರಣಗಿ, ಶ್ರೀಕಾಂತ ಪಾಟೀಲ, ನಾಗರಾಜ ಸಂಗೋಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button