ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೇಲುಗೈ: ಎನ್ಡಿಎ ಮೈತ್ರಿಗೆ ಭಂಗ
ನೂತನ ಮೇಯರ್ ಆಗಿ ಶೇಕ್ ಅಜ್ಮಲ್ ಅಹ್ಮದ್ ಗೋಲಾ, ಉಪಮೇಯರ್ ಆಗಿ ಫರ್ಹಾನಾಜ್ ಖುಸ್ರೋ ಜಹಗೀರದಾರ್ ಆಯ್ಕೆ

ಕಲಬುರಗಿ, ಆ.29- ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ಶನಿವಾರ ನಡೆದ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. ಇದರೊಂದಿಗೆ ಪಾಲಿಕೆಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಕಾಂಗ್ರೆಸ್ ಪಾಲಾಗಿದೆ. ಮೇಯರ್ ಸ್ಥಾನಕ್ಕೆ ವಾರ್ಡ್ ಸಂಖ್ಯೆ 21ರ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಶೇಕ್ ಅಜ್ಮಲ್ ಅಹ್ಮದ್ ಗೋಲಾ ಮತ್ತು ಉಪಮೇಯರ್ ಸ್ಥಾನಕ್ಕೆ ವಾರ್ಡ್ ಸಂಖ್ಯೆ 20ರ ಸದಸ್ಯೆ ಫರ್ಹಾನಾಜ್ ಖುಸ್ರೋ ಜಹಗೀರದಾರ್ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕೆ ಶೇಕ್ ಅಜ್ಮಲ್ ಅಹ್ಮದ್ ಗೋಲಾ, ಬಿಜೆಪಿ ಸದಸ್ಯ ಗುರುರಾಜ್ ಹಾಗೂ ಜೆಡಿಎಸ್ ಸದಸ್ಯ ಅಲಿಮುದ್ದೀನ್ ಪಟೇಲ್ ನಾಮಪತ್ರ ಸಲ್ಲಿಸಿದ್ದರು. ನಡೆದ ಚುನಾವಣೆಯಲ್ಲಿ ಗೋಲಾ ಪರ 35 ಸದಸ್ಯರು, ಗುರುರಾಜ್ ಪರ 29 ಹಾಗೂ ಅಲಿಮುದ್ದೀನ್ ಪಟೇಲ್ ಪರ ಮೂವರು ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಹೆಚ್ಚಿನ ಮತ ಪಡೆದ ಶೇಕ್ ಅಜ್ಮಲ್ ಅಹ್ಮದ್ ಗೋಲಾ ಅವರನ್ನು ಚುನಾವಣಾಧಿಕಾರಿಗಳು ವಿಜಯಿ ಎಂದು ಘೋಷಿಸಿದರು.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಫರ್ಹಾನಾಜ್ ಖುಸ್ರೋ ಜಹಗೀರದಾರ್ ಹಾಗೂ ಬಿಜೆಪಿ ಸದಸ್ಯೆ ಮೇಘನಾ ಕಳಸ್ಕರ್ ನಾಮಪತ್ರ ಸಲ್ಲಿಸಿದ್ದರು. ಫರ್ಹಾನಾಜ್ ಖುಸ್ರೋ ಜಹಗೀರದಾರ್ ಪರ 35 ಹಾಗೂ ಮೇಘನಾ ಕಳಸ್ಕರ್ ಪರ 29 ಸದಸ್ಯರು ಮತ ಚಲಾಯಿಸಿದರು. ಹೆಚ್ಚಿನ ಮತ ಪಡೆದ ಫರ್ಹಾನಾಜ್ ಖುಸ್ರೋ ಜಹಗೀರದಾರ್ ಅವರನ್ನು ಉಪಮೇಯರ್ ಆಗಿ ಘೋಷಿಸಲಾಯಿತು.
ನೂತನ ಮೇಯರ್ ಮತ್ತು ಉಪಮೇಯರ್ ಅವರಿಗೆ ಚುನಾವಣಾಧಿಕಾರಿ ಜಹೀರಾ ನಸ್ರೀನ್ ಅವರು ಹೂಗುಚ್ಛ ನೀಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯೂ ನಡೆಯಿತು. ತೆರಿಗೆ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿಗೆ ರಾಗಮ್ಮ ಎಸ್. ಇನಾಮದಾರ್, ಸೈಯದಾ ನೂರ್ ಫಾತಿಮಾ ಜೈದಿ, ವಿಜಯಕುಮಾರ್ ದ್ವಾರಕದಾಸ್ ಸೇವಲಾನಿ, ಹೊನ್ನಮ್ಮ ಬಾಬು, ಶಂಭುಲಿಂಗ ಪಾಟೀಲ, ಹೀನಾ ಬೇಗಂ, ಅಬ್ದುಲ್ ರಹೀಂ ಹಾಗೂ ಪುತ್ರಿ ಬೇಗಂ ಆಯ್ಕೆಯಾದರು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಯಲ್ಲಪ್ಪ ತಂಗೆ ಶಿವಶರಣಪ್ಪ ನಾಯ್ಕೊಡಿ, ಪ್ರಕಾಶ್ ಎಚ್. ಕಪನೂರ್, ರೇಣುಕಾ ಪರಶುರಾಮ್, ಪರ್ವೀನ್ ಬೇಗಂ, ಪಾರ್ವತಿ ಗಂಡರಾಜು ದೇವದುರ್ಗ, ವಿಶಾಲಕುಮಾರ್ ನವರಂಗ ಹಾಗೂ ವಿಶಾಲ ಎಸ್. ಧರ್ಗಿ ಅವಿರೋಧವಾಗಿ ಆಯ್ಕೆಯಾದರು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಏಳು ಸ್ಥಾನಗಳಿಗೆ ಒಟ್ಟು ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಗಂಗಮ್ಮ ಎ. ಬಸವರಾಜ್ ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಸೈಯದಾ ಮಸೀರಾ ನಸ್ರೀನ್, ಶೇಖ್ ಹುಸೇನ್, ರಿಯಾಜ್ ಅಹ್ಮದ್ ಸಿದ್ದಿಶಾರಿಫುರ್ ರೆಹಮಾನ್, ಲತಾ ರವೀಂದ್ರಕುಮಾರ್, ಸಚಿನ್ ರವಿಕುಮಾರ್ ಹೊನ್ನಾ, ಅರ್ಚನಾ ಗಂಡ ಬಸವರಾಜ್ ಪಾಟೀಲ ಬಿರಾಳ್ ಹಾಗೂ ವೀರಣ್ಣ ಹುನ್ನಳ್ಳಿ ಅವಿರೋಧವಾಗಿ ಆಯ್ಕೆಯಾದರು.
ಲೆಕ್ಕ ಸ್ಥಾಯಿ ಸಮಿತಿಗೆ ಶಿವಾನಂದ ಡಿ. ಪಿಸ್ತೀ, ಅರುಣಾಬಾಯಿ ಅಂಬರಾಯ, ತಹಸೀನ್, ಇಫ್ರಾನಾ ಪರ್ವೀನ್, ಮಹಮ್ಮದ್ ಅಜೀಮೊದ್ದೀನ್, ಮೊಹಮ್ಮದ್ ಅಯ್ಯಾಜ್ ಖಾನ್ ಹಾಗೂ ಗಂಗಮ್ಮ ಗಂಡ ಬಸವರಾಜ್ ಅವಿರೋಧವಾಗಿ ಆಯ್ಕೆಯಾದರು.
ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸ್ರೀನ್ ಅವರು ಚುನಾವಣಾಧಿಕಾರಿಯಾಗಿ ಸಂಪೂರ್ಣ ಚುನಾವಣಾ ಪ್ರಕ್ರಿಯೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಹಾಗೂ ಪ್ರಭಾರಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಆಯುಕ್ತೆ (ಅಭಿವೃದ್ಧಿ) ಪ್ರಮೀಳಾ ಎಂ.ಕೆ., ಸಭಾ ಕಾರ್ಯದರ್ಶಿ ಬಿ.ಟಿ. ನಾಯ್ಕ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಚಂದ್ರಶೇಖರ ಪಾಟೀಲ, ಶಶೀಲ್ ಜಿ. ನಮೋಶಿ, ಜಗದೇವ ಗುತೇದಾರ್ ಹಾಗೂ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಅಭಿವೃದ್ಧಿಗೆ ಶ್ರಮಿಸುವೆ: ಗೋಲಾ
ನೂತನ ಮಹಾಪೌರರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೇಕ್ ಅಜ್ಮಲ್ ಅಹ್ಮದ್ ಗೋಲಾ, ಪ್ರಸ್ತುತ ಬರದ ಛಾಯೆಯಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಗೆ ಮೊದಲ ಆದ್ಯತೆ ನೀಡಲಾಗುವುದು. 24 ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆಗೆ ವೇಗ ನೀಡಲಾಗುವುದು. ಕಸ ವಿಲೇವಾರಿ ಸೇರಿದಂತೆ ನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಸರ್ಕಾರಿ ಆಸ್ತಿ ಒತ್ತುವರಿ ಹಾಗೂ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದರು.
ನಗರದ ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ಆದ್ಯತೆ ಪಟ್ಟಿ ಸಿದ್ಧಪಡಿಸಿ ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಸಂಗ್ರಹ ಹೆಚ್ಚಿಸಿ ಮೂಲಸೌಕರ್ಯ ಅಭಿವೃದ್ಧಿಗೆ ಹಣ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.
ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಎನ್ಡಿಎ ಮೈತ್ರಿಕೂಟದ ಒಗ್ಗಟ್ಟು ಮತ್ತೊಮ್ಮೆ ಪ್ರಶ್ನಾರ್ಹವಾಗಿದೆ. ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸಿದ್ದು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಎನ್ಡಿಎ ಮೈತ್ರಿಗೆ ಭಂಗ ಉಂಟಾಗಿದೆ.



