ಶಿಕ್ಷಣ

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಘಟಿಕೋತ್ಸವ: ದೇಶದ ಅಭಿವೃದ್ಧಿಗೆ ಯುವಜನತೆ ಜ್ಞಾನ, ಪ್ರತಿಭೆ ಬಳಸಲಿ

ಶಿಕ್ಷಣ ಕೇವಲ ಪದವಿ ಪಡೆಯುವ ಸಾಧನವಲ್ಲ; ಜ್ಞಾನ, ಕೌಶಲ್ಯ ಹಾಗೂ ಜವಾಬ್ದಾರಿಯುತ ಭವಿಷ್ಯ ರೂಪಿಸುವ ಶಕ್ತಿ: ಡಾ. ಅಜಯಸಿಂಗ್

ಕಲಬುರಗಿ, ಆ.29: ಇಂದಿನ ಯುವಜನತೆ ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ರಾಜ್ಯದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಡಾ. ಅಜಯಸಿಂಗ್ ಕರೆ ನೀಡಿದರು.

ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಕೇವಲ ಪದವಿ ಪಡೆಯುವ ಸಾಧನವಲ್ಲ. ಅದು ಜ್ಞಾನ, ಕೌಶಲ್ಯ ಹಾಗೂ ಜವಾಬ್ದಾರಿಯುತ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ ಎಂದು ಬಣ್ಣಿಸಿದರು.

ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಹಾರೈಸಿದ ಸಚಿವರು, ತಮ್ಮ ಮುಂದಿನ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಒಟ್ಟು 690 ಪದವೀಧರರು ಹಾಗೂ 39 ಸ್ನಾತಕೋತ್ತರ ಪದವೀಧರರು ಸೇರಿದಂತೆ 729 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪೈಕಿ ಅತ್ಯಧಿಕ ಗ್ರೇಡ್ ಪಾಯಿಂಟ್ ಪಡೆದ 19 ವಿದ್ಯಾರ್ಥಿಗಳಲ್ಲಿ ಒಟ್ಟು 35 ಚಿನ್ನದ ಪದಕಗಳನ್ನು ವಿತರಿಸಲಾಯಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಅಬ್ದುಲ್ಲಾ ದಾನೀಶ್ ಅವರು ಏಳು ಚಿನ್ನದ ಪದಕ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರವಜಲ್ ಜಿ. ಶಾಸ್ತ್ರಿ ಅವರು ಆರು ಚಿನ್ನದ ಪದಕಗಳನ್ನು ಪಡೆದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಭಿಷೇಕ್, ಎಲೆಕ್ಟ್ರಾನಿಕ್ಸ್ ವಿಭಾಗದ ತಲ್ಲಾ ಸುಫಿಯಾನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ತಲ್ಲಾ ಅಮನ್ ಅಲಿ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಸಾಗರ್ ಅವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದರು. ವಿವಿಧ ವಿಭಾಗಗಳ 11 ವಿದ್ಯಾರ್ಥಿಗಳೂ ಚಿನ್ನದ ಪದಕಕ್ಕೆ ಭಾಜನರಾದರು. ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಮೂರು ಚಿನ್ನದ ಪದಕಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಳಿನ್ ಅತುಲ್ ಅವರು ಮುಖ್ಯ ಅತಿಥಿಯಾಗಿ, ಬೆಂಗಳೂರಿನ ಸುಮಿತ್ ಕನ್ಸಲ್ಟಿಂಗ್ ಸಂಸ್ಥೆಯ ಮುಖ್ಯಸ್ಥ ಹಾಗೂ ಪಿಡಿಎ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂದೀಪ್ ಶರ್ಮಾ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಬೆಂಗಳೂರಿನ ಸಂಸ್ಥೆಯ ಪ್ರತಿನಿಧಿ ಸಂದೀಪ್ ಶರ್ಮಾ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button