ನಿವೇಶನ ಮ್ಯುಟೇಷನ್ಗೆ ಫೋನ್ಪೇ ಮೂಲಕ ₹12 ಸಾವಿರ ಲಂಚ: ಬಿರಾಳ್ ಪಿಡಿಒ ಲೋಕಾಯುಕ್ತ ಬಲೆಗೆ
ಸರ್ಕಾರಿ ಜಾಗವನ್ನು ಫಲಾನುಭವಿಯ ಹೆಸರಿಗೆ ಮ್ಯುಟೇಷನ್ ಮಾಡಲು ಲಂಚ ಸ್ವೀಕರಿಸಿದ ಆರೋಪ; ಅಧಿಕಾರಿಯ ಬಂಧನ

ಕಲಬುರಗಿ, ಆ.29- ನಿವೇಶನದ ಮ್ಯುಟೇಷನ್ ಮಾಡಿಕೊಡಲು ಫೋನ್ಪೇ ಮೂಲಕ ₹12 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜೇವರ್ಗಿ ತಾಲೂಕಿನ ಬಿರಾಳ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೈಬೂಬ್ ಪಟೇಲ್ ಅವರನ್ನು ಶನಿವಾರ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಿವರೆಡ್ಡಿ ಎಂಬುವವರು ನೀಡಿದ ದೂರಿನ ಅನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿರಾಳ್ ಗ್ರಾಮದಲ್ಲಿ ಇರುವ ಸರ್ಕಾರಿ ಖುಲ್ಲಾ ಜಾಗದ ಪೈಕಿ 20-30 ಅಳತೆಯ ಜಾಗವನ್ನು ಸ್ವಗ್ರಾಮದ ಮರೇಪ್ಪ ತಳವಾರ್ ಎಂಬುವವರ ಹೆಸರಿಗೆ ಮ್ಯುಟೇಷನ್ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿ ಮನವಿ ಮಾಡಲಾಗಿತ್ತು. ಈ ಕಾರ್ಯಕ್ಕಾಗಿ ಪಿಡಿಒ ₹18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ₹12 ಸಾವಿರ ಲಂಚದ ಹಣವನ್ನು ಫೋನ್ಪೇ ಮೂಲಕ ಸ್ವೀಕರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಲಂಚದ ಹಣವನ್ನು ಫೋನ್ಪೇ ಮೂಲಕ ಪಾವತಿಸಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಪಿಡಿಒ ಮೈಬೂಬ್ ಪಟೇಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ತನಿಖೆಯನ್ನು ಲೋಕಾಯುಕ್ತ ತನಿಖಾಧಿಕಾರಿ ಪಿಐ ಅರುಣ್ಕುಮಾರ್ ಮುರುಗಂಡಿ ಕೈಗೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



