ಜಿಲ್ಲಾಸುದ್ದಿ

ರೈತರಿಗೆ ವಿಮಾ ಕಂಪನಿಯಿಂದ ವಂಚನೆ ಆರೋಪ: ನವೆಂಬರ್ 20ರಂದು ಇನ್ಡೋಸ್ ಇನ್ಶೂರೆನ್ಸ್ ಕಚೇರಿ ಎದುರು ಪ್ರತಿಭಟನೆ

ಕಲಬುರಗಿ, ನ.17: ಬರಗಾಲದಿಂದ ಮುಂಗಾರು ಮತ್ತು ಹಿಂಗಾರು ಬೆಳೆಗಳು ಸಂಪೂರ್ಣ ಹಾನಿಗೀಡಾಗಿದ್ದು, ಉಳಿದ ಅಲ್ಪಸ್ವಲ್ಪ ಬೆಳೆಗಳೂ ಬಿಸಿಲಿನ ತಾಪಕ್ಕೆ ಒಣಗುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಇನ್ಡೋಸ್ ಇನ್ಶೂರೆನ್ಸ್ ಕಂಪನಿಯು ಕಲಬುರಗಿ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹೆಸರಿನಲ್ಲಿ ವಂಚನೆ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬೆಳೆ ವಿಮೆಗೆ ಸಂಬಂಧಿಸಿದಂತೆ ಕಂಪನಿಯು ಸಮರ್ಪಕ ಪರಿಹಾರ ನೀಡದೆ ಅನ್ಯಾಯ ಎಸಗುತ್ತಿದೆ. ರೈತರು ಪಾವತಿಸಿದ ವಿಮಾ ಕಂತಿಗೆ ಅನುಗುಣವಾಗಿ ಪರಿಹಾರ ನೀಡದೆ, ಸರಾಸರಿ ಶೇ.40ರಷ್ಟು ಮಾತ್ರ ಪಾವತಿಸಿ ಕೈತೊಳೆದುಕೊಳ್ಳುತ್ತಿದೆ ಎಂದು ದೂರಿದರು. ಕಂಪನಿಯ ರೈತ ವಿರೋಧಿ ನೀತಿಯನ್ನು ಖಂಡಿಸಿ ನವೆಂಬರ್ 20ರಂದು ಇನ್ಡೋಸ್ ಇನ್ಶೂರೆನ್ಸ್ ಕಂಪನಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಆರ್ಥಿಕತೆಯು ತೊಗರಿ ಬೆಳೆಯ ಮೇಲೆ ಅವಲಂಬಿತವಾಗಿದೆ. ಉತ್ತಮ ಬೆಳೆ ಬಂದಾಗ ಮಾತ್ರ ಅನ್ನದಾತರ ಮುಖದಲ್ಲಿ ಮಂದಹಾಸ ಕಾಣಲು ಸಾಧ್ಯ. ಆದರೆ ಒಂದು ಕಡೆ ಬರ, ಮತ್ತೊಂದು ಕಡೆ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಾದರೂ ಸೂಕ್ತ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 4.52 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದು, ರೈತರಿಂದ ಒಟ್ಟು ₹670.87 ಕೋಟಿ ವಿಮಾ ಕಂತು ಸಂಗ್ರಹವಾಗಿದೆ. ಜಿಲ್ಲೆಯ ರೈತರು ಸುಮಾರು 5.52 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಬ್ಬಿನ ಬೆಲೆ ನಿಗದಿ ವಿಚಾರದಲ್ಲೂ ರೈತರಿಗೆ ಅನ್ಯಾಯ

ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸುವ ವಿಚಾರದಲ್ಲಿ ರೈತರು ಒಪ್ಪಿಗೆ ಸೂಚಿಸಿದ್ದರೂ, ಕಾರ್ಖಾನೆಗಳು ರೈತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಆದಾಯ ಹಂಚಿಕೆ ಮೊತ್ತವನ್ನು ನೀಡಲು ಸಿದ್ಧವಿಲ್ಲ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಹಿತ ಕಾಪಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಲ್ಕನೇ ಸಭೆ ಕರೆಯಲಾಗಿತ್ತು ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಭೆಯಲ್ಲಿ ಕಬ್ಬು ಬೆಳೆಗಾರರು ಒಗ್ಗಟ್ಟಿನಿಂದ ನ್ಯಾಯಯುತ ದರ ನೀಡಬೇಕೆಂದು ಪಟ್ಟು ಹಿಡಿದರು. ರೈತರು, ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ವಾಗ್ವಾದವೂ ನಡೆಯಿತು. ಬಳಿಕ ಮಧ್ಯಾಹ್ನ ನಡೆದ ಸಭೆಯಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ₹3,450 ಪಾವತಿಸಬೇಕು ಹಾಗೂ ಬೆಳಗಾವಿ ಮಾದರಿಯಲ್ಲಿ ಆದಾಯ ಹಂಚಿಕೆ ಮೊತ್ತ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ಸೂಚಿಸಿದರು ಎಂದು ವಿವರಿಸಿದರು.

ರೈತರ ಸಮ್ಮುಖದಲ್ಲಿಯೇ ಒಪ್ಪಿಗೆ ನೀಡಿದ ಬಳಿಕ, ಕಾರ್ಖಾನೆಗಳು ಒಪ್ಪಂದ ಪತ್ರ ನೀಡಬೇಕೆಂದು ರೈತರು ಒತ್ತಾಯಿಸಿದರು. ಅಲ್ಲದೆ, ಈಗಾಗಲೇ ಒಣಗುತ್ತಿರುವ ಕಬ್ಬಿನ ಕಟಾವು ಆರಂಭಿಸಲು ಕಾರ್ಖಾನೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು. ಅಂತಿಮವಾಗಿ ಕಾರ್ಖಾನೆಗಳು ಕಬ್ಬು ಕಟಾವು ಆರಂಭಿಸಲು ಒಪ್ಪಿಗೆ ನೀಡಿದವು ಎಂದು ಹೇಳಿದರು.

ಆದರೆ, ಸಂಜೆ ನಡೆದ ರೈತರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,500 ಮೊದಲ ಕಂತು ಪಾವತಿಸಬೇಕು ಹಾಗೂ ಬೆಳಗಾವಿ ಮಾದರಿಯಲ್ಲಿ ಆದಾಯ ಹಂಚಿಕೆ ಮೊತ್ತ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರು. ಕೇವಲ ₹100 ಪಾವತಿಸಿ ರೈತರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ. ಇದು ರೈತರಿಗೆ ಆಗಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ರೈತರ ಹೋರಾಟಕ್ಕೆ ಮಣಿದ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವಿಗೆ ಒಪ್ಪಿಗೆ ನೀಡಿರುವುದು ಅಲ್ಪ ಸಮಾಧಾನ ತಂದಿದೆ ಎಂದರು.

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಪರಿಹಾರಕ್ಕೆ ಆಗ್ರಹ

ಕಹಿ ಉಣ್ಣುವ ಕಬ್ಬು ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಕಾಯಕವೇ ಶಾಪವಾಗಿ ಪರಿಣಮಿಸುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ. ಕಬ್ಬು ಬೆಳೆಗಾರರು ತಮ್ಮ ಮಕ್ಕಳ ಶಿಕ್ಷಣ, ಮದುವೆ ಹಾಗೂ ಕುಟುಂಬದ ನಿರ್ವಹಣೆಯ ಜವಾಬ್ದಾರಿಗಳನ್ನು ನಿಭಾಯಿಸಲಾಗದೆ ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ನೆರವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಜ್ಞಾನಿಕ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಪಡಿಸಬೇಕು. ಸಕ್ಕರೆ ಇಳುವರಿಯಲ್ಲಿ ನಡೆಯುವ ಮೋಸ ತಡೆಗಟ್ಟಬೇಕು. ರೈತರ ಸಮ್ಮುಖದಲ್ಲಿ 12 ತಿಂಗಳ ಕಬ್ಬಿನ ಸಕ್ಕರೆ ಇಳುವರಿ ಪರೀಕ್ಷೆ ನಡೆಸಬೇಕು. ತೂಕದಲ್ಲಿ ನಡೆಯುವ ಮೋಸ ತಡೆಗಟ್ಟಬೇಕು. ಕಬ್ಬು ಕಟಾವು ಮಾಡಿದ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಪದ್ಧತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಕಬ್ಬು ಕಟಾವು ಮಾಡಿದ ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಎರಡು ದಿನ ತೂಕ ಮಾಡದೆ ನಿಲ್ಲಿಸಿ ರೈತರನ್ನು ಶೋಷಿಸುವುದನ್ನು ತಡೆಯಬೇಕು. ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ ಈಗಾಗಲೇ ನಿಗದಿಪಡಿಸಿರುವ ದರವನ್ನು ರೈತರಿಗೆ ನೀಡಬೇಕು. ಇಡೀ ಕರ್ನಾಟಕಕ್ಕೆ ಏಕರೂಪದ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಚಿಂಚೋಳಿ ಮತ್ತು ಕಾಳಗಿ ಭಾಗದ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ಕಬ್ಬು ಒಣಗುತ್ತಿದೆ. ಈ ಭಾಗದ ರೈತರ ಜೀವನಾಧಾರವಾಗಿರುವ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣ ಆರಂಭಿಸಬೇಕು. ಚಿಂಚೋಳಿ ಕಾರ್ಖಾನೆ ಕಾರ್ಯಾರಂಭ ಮಾಡುವವರೆಗೆ ಇತರ ಸಕ್ಕರೆ ಕಾರ್ಖಾನೆಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ರೈತರ ಕಬ್ಬು ಕಟಾವು ಮಾಡಿಸಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳಲ್ಲಿ ಶೇ.50ರಷ್ಟು ಪಾಲನ್ನು ಕಬ್ಬು ಬೆಳೆಗಾರರಿಗೆ ನೀಡಬೇಕು. ಒಣಗುತ್ತಿರುವ ಕಬ್ಬಿನ ಕಟಾವು ಮತ್ತು ನುರಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಲು ಕಾರ್ಖಾನೆಗಳು ಕ್ರಮ ಕೈಗೊಳ್ಳಬೇಕು ಎಂದು ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದಿಲೀಪ್ ನಾಗೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button