ಜಿಲ್ಲಾಸುದ್ದಿ

ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ತಹಸೀಲ್ದಾರ್ ಸಭೆ

ಬೇಡಿಕೆಗಳನ್ನು ಗಂಭೀರವಾಗಿ ಆಲಿಸಿ, ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದ ಅಧಿಕಾರಿಗಳು

ಜೇವರ್ಗಿ, ಆ.29- ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜೇವರ್ಗಿ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪೌರಕಾರ್ಮಿಕರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಗಳು, ಉದ್ಯೋಗ ಹಾಗೂ ಕೂಲಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಪೌರಕಾರ್ಮಿಕರ ಬೇಡಿಕೆಗಳನ್ನು ಅಧಿಕಾರಿಗಳು ಗಂಭೀರವಾಗಿ ಆಲಿಸಿ, ಅವುಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವ ಆಶಾಭಾವನೆ ವ್ಯಕ್ತಪಡಿಸಿದರು. ಪೌರಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಹಂತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಭರವಸೆ ನೀಡಲಾಯಿತು.

ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದ ತಮ್ಮ ಬೇಡಿಕೆಗಳು ಶೀಘ್ರದಲ್ಲೇ ಈಡೇರಬಹುದು ಎಂಬ ನಿರೀಕ್ಷೆಯನ್ನು ಪೌರಕಾರ್ಮಿಕರು ವ್ಯಕ್ತಪಡಿಸಿದರು. ಆದರೆ, ಬೇಡಿಕೆಗಳು ಕೇವಲ ಭರವಸೆಗೆ ಸೀಮಿತವಾಗದೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿದರು.

ಪೌರಕಾರ್ಮಿಕರಿಗೆ ನ್ಯಾಯ ದೊರೆಯುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಹೋರಾಟಗಾರರು ಸ್ಪಷ್ಟಪಡಿಸಿದರು. ಕಾರ್ಮಿಕರ ಪರ ಸಂಘಟನೆಗಳ ಮುಖಂಡರಾದ ಮಹೇಶ್ ರಾಠೋಡ್, ಬಾಬು ಬಿ. ಪಾಟೀಲ, ಇಬ್ರಾಹಿಂ ಪಟೇಲ್ ಯಾಳವಾರ, ಸಿದ್ದರಾಮ ಕಟ್ಟೀ, ಸಿದ್ದು ಕೆರೂರು, ಶ್ರೀಹರಿ ಕರ್ಕಳ್ಳಿ, ಬಿ.ಎಚ್. ಮಾಲಿ ಪಾಟೀಲ, ಪರಮಾನಂದ ಯಲಗೋಡ, ಸಿದ್ದನಗೌಡ ರಾಜವಾಳ, ಪರಮೇಶ್ವರ ಬಿರಾಳ, ಗುಂಡಪ್ಪ ಜಡಗಿ, ಶ್ರೀಮಂತ ಕಿಲ್ಲೇದಾರ, ರಾಘವೇಂದ್ರ ಬುದ್ಧನಗರ್, ಬಸವರಾಜ ಇಂಗಳಗಿ, ವಿಶ್ವರಾಜ್ಯ ಗೋವಾಳ್ಕರ್, ಅಬ್ದುಲ್ ಗನಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪೌರಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಅವರ ಹಕ್ಕುಗಳು ಹಾಗೂ ಬೇಡಿಕೆಗಳನ್ನು ಈಡೇರಿಸಲು ಆಡಳಿತವು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button