ಕೆಎಎಸ್ ಪರೀಕ್ಷೆಗೆ ಹಳೆಯ ಪ್ರವೇಶ ಪತ್ರ ತಂದ ಅಭ್ಯರ್ಥಿ ಎಡವಟ್ಟು; ಪರೀಕ್ಷೆ ಬರೆಯದೆ ಮನೆಗೆ ಮರಳಿದ ಯುವತಿ

ಕಲಬುರಗಿ, ನ.16: ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಭಾನುವಾರ ರಾಜ್ಯಾದ್ಯಂತ ಬಿಗಿ ಭದ್ರತೆಯ ನಡುವೆ ಆರಂಭವಾಯಿತು. ಈ ವೇಳೆ ಕಲಬುರಗಿಯಲ್ಲಿ ಯುವತಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಹಳೆಯ ಪ್ರವೇಶ ಪತ್ರ ತಂದು ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಯುವತಿ ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯ ಪರೀಕ್ಷೆ ಬರೆದಿದ್ದ ವೇಳೆ ಬಳಸಿದ್ದ ಪ್ರವೇಶ ಪತ್ರವನ್ನೇ ಕೆಎಎಸ್ ಪರೀಕ್ಷಾ ಕೇಂದ್ರಕ್ಕೆ ತಂದಿದ್ದರು. ಹೀಗಾಗಿ ಪರೀಕ್ಷಾ ಕೇಂದ್ರದ ಬಳಿ ಗೊಂದಲಕ್ಕೀಡಾದ ಅವರು, ಪ್ರವೇಶ ಪಡೆಯಲು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಆದರೆ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಒಳಗೆ ಬಿಡುವಂತೆ ಯುವತಿ ಮನವಿ ಮಾಡಿದರೂ ನಿಯಮಗಳ ಪ್ರಕಾರ ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವೇಶ ನಿರಾಕರಣೆಯಿಂದ ನಿರಾಸೆಗೊಂಡ ಯುವತಿ ಕೊನೆಗೆ ಮನೆಗೆ ಮರಳಿದ್ದಾರೆ.
ಇನ್ನೊಂದೆಡೆ, ನಗರದ ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಬೀದರ್ನಿಂದ ಬಂದಿದ್ದ ಅಭ್ಯರ್ಥಿಯೊಬ್ಬರು ತಡವಾಗಿ ಆಗಮಿಸಿದ್ದರಿಂದ ಅವರಿಗೆ ಆರಂಭದಲ್ಲಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿರಾಕರಿಸಲಾಯಿತು. ಗೇಟ್ ಬಳಿ ಅಧಿಕಾರಿಗಳ ಮುಂದೆ ಅಭ್ಯರ್ಥಿ ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದನ್ನು ಗಮನಿಸಿದ ಅಧಿಕಾರಿಗಳು, ಅಂತಿಮವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಿದರು.



