
ಬೀದರ್, ಅ. 26: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಭಾವಿ ನಾಯಕ ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ಇನ್ನು ಮುಂದೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಬೀದರ್ ಜಿಲ್ಲೆಯ ಐತಿಹಾಸಿಕ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ 25ನೇ ಕಲ್ಯಾಣ ಪರ್ವ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ತಮ್ಮ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದರು.
ಲಿಂಗಾಯತ ಧರ್ಮದ ಪ್ರತ್ಯೇಕ ಮಾನ್ಯತೆಗಾಗಿ ನಡೆಯುವ ಹೋರಾಟದಲ್ಲಿ ಇನ್ನು ಮುಂದೆ ತಾವು ಭಾಗವಹಿಸುವುದಿಲ್ಲ. ನಮ್ಮ ಅಸ್ಮಿತೆ ಏನು ಎಂಬುದನ್ನು ಪೂಜ್ಯ ಸ್ವಾಮೀಜಿಗಳು ಹಾಗೂ ಮುಂದಿನ ಯುವ ಪೀಳಿಗೆಗೆ ಬಿಡುತ್ತೇನೆ. ಈ ಕುರಿತು ಸಮಾಜವೇ ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದು ಎಂ.ಬಿ. ಪಾಟೀಲ ಹೇಳಿದರು.
ಒಗ್ಗಟ್ಟಿಗೆ ಆದ್ಯತೆ ನೀಡುವ ಅಗತ್ಯ
ಲಿಂಗಾಯತ ಮತ್ತು ವೀರಶೈವರ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ಅವರು, ಲಿಂಗಾಯತ ಸಮುದಾಯದಲ್ಲಿ ವೀರಶೈವರೂ ಒಂದು ಭಾಗವಾಗಿದ್ದಾರೆ. ಪ್ರಸ್ತುತ ನಮ್ಮ ನಡುವೆ ಕೆಲವು ಭಿನ್ನಾಭಿಪ್ರಾಯಗಳಿರುವುದು ನಿಜ. ಆದರೆ, ಇನ್ನು ಮುಂದೆ ಆ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಕಲ್ಯಾಣ ಪರ್ವದ ವೇದಿಕೆಯಲ್ಲಿ ಲಿಂಗಾಯತ ಮತ್ತು ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಸಮಾಜವನ್ನು ವಿಭಜಿಸದೆ ಪರಸ್ಪರ ಸಮನ್ವಯ ಮತ್ತು ಸಹಕಾರದೊಂದಿಗೆ ಮುನ್ನಡೆಯುವ ಅಗತ್ಯವಿದೆ ಎಂದು ಹೇಳಿದರು.



