ರಾಜಕೀಯ

ರೈತರ ಪರ ಸದನದಲ್ಲಿ ಧ್ವನಿ ಎತ್ತಿದ್ದಕ್ಕೆ ಟೀಕೆ ಸಲ್ಲದು: ಮಾಜಿ ಶಾಸಕ ರೇವೂರ್ ವಿರುದ್ಧ ಅಲ್ಲಮಪ್ರಭು ಆಕ್ರೋಶ

ಸದನದಲ್ಲಿ ರೈತರ ಪರ ಮಾತನಾಡಿದ್ದಕ್ಕೆ ಉದ್ಧಟತನದ ಹೇಳಿಕೆ: ರೇವೂರ್ ವಿರುದ್ಧ ಅಲ್ಲಮಪ್ರಭು ಆಕ್ರೋಶ

ಕಲಬುರಗಿ, ಆ.26- ರೈತರ ನೋವು, ಸಂಕಷ್ಟ ಹಾಗೂ ಸಮಸ್ಯೆಗಳ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಿ ಮಾತನಾಡಿದ್ದಕ್ಕೆ ಮಾಜಿ ಶಾಸಕ ದತ್ತಾತ್ರೇಯ ರೇವೂರ್ ಅವರು ತಮ್ಮ ವಿರುದ್ಧ ಉದ್ಧಟತನದ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವೂರ್ ಅವರ ಕ್ಷೇತ್ರದ ಜನತೆ ಹಾಗೂ ರೈತರು ಅವರ ಮಾತುಗಳನ್ನು ಕೇಳುತ್ತಿದ್ದಾರೆ. ಅವರೇ ನ್ಯಾಯ ಕೊಡುತ್ತಾರೆ ಎಂಬ ನಂಬಿಕೆ ಜನರಲ್ಲಿದೆ. ಹೀಗಿರುವಾಗ ರೈತರ ಪರ ಸದನದಲ್ಲಿ ಮಾತನಾಡಿದ್ದನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಜಿಲ್ಲೆಯ ರೈತರ ಕಣ್ಣೀರಿಗೆ ನಿರಂತರವಾಗಿ ಸ್ಪಂದಿಸುವುದು ಹಾಗೂ ರೈತರ ಪರವಾಗಿ ನಿಲ್ಲುವುದು ತಮ್ಮ ಜವಾಬ್ದಾರಿಯಾಗಿದೆ. ರೈತರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಸಂದರ್ಭದಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ರೈತರಿಗಾಗಿ ಧ್ವನಿ ಎತ್ತಬೇಕು ಎಂಬ ಉದ್ದೇಶದಿಂದ ತಾವು ಮಾತನಾಡಿದ್ದಾಗಿ ಅಲ್ಲಮಪ್ರಭು ಪಾಟೀಲ್ ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ರಾಜ್ಯದ, ಅದರಲ್ಲೂ ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟ ಹಾಗೂ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ವೇಳೆ ಪ್ರತಿಪಕ್ಷದವರು ಬಿ. ನಾಗೇಂದ್ರ ಅವರ ವಿಚಾರವಾಗಿ ಧರಣಿ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸೋಣ, ಎಲ್ಲರೂ ಪಕ್ಷಭೇದ ಮರೆತು ರೈತರಿಗಾಗಿ ಒಂದಾಗೋಣ ಎಂದು ತಾವು ಭಾವೋದ್ವೇಗದಿಂದ ಮಾತನಾಡಿದ್ದಾಗಿ ಅವರು ವಿವರಿಸಿದರು.

ಈ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ತಮ್ಮ ಕ್ಷೇತ್ರದ ರೈತರು ಸೇರಿದಂತೆ ನಾಡಿನ ಅನ್ನದಾತರು ತಮ್ಮ ನೋವು ಹಾಗೂ ಸಂಕಷ್ಟಕ್ಕೆ ಸದನದಲ್ಲಿ ಶಾಸಕರು ಧ್ವನಿ ನೀಡಿದರು ಎಂಬ ತೃಪ್ತಿ ಹೊಂದಿದ್ದಾರೆ ಎಂದು ಹೇಳಿದರು.

ರೈತರ ಪರ ನಿಲುವು ಮುಂದುವರಿಯಲಿದೆ

ಮಾಜಿ ಶಾಸಕ ರೇವೂರ್ ಗೌಡರು ತಮ್ಮ ಸದನದ ಹೇಳಿಕೆಯನ್ನು ನಾಟಕ ಎಂದು ಬಣ್ಣಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅಲ್ಲಮಪ್ರಭು ಪಾಟೀಲ್, “ನನ್ನ ಮಾತಿನಲ್ಲಿ, ನನ್ನ ಹಾವಭಾವದಲ್ಲಿ ನಾಟಕ ಕಂಡಿದ್ದಾರೆ. ನಾನು ರೈತರ ಹೆಸರಿನಲ್ಲಿ ಡ್ರಾಮಾ ಮಾಡಿದ್ದಾಗಿ ಹೇಳಿದ್ದಾರೆ. ಇಂತಹ ಹೇಳಿಕೆ ಅವರ ಘನತೆಗೆ ತಕ್ಕುದಲ್ಲ” ಎಂದು ತಿರುಗೇಟು ನೀಡಿದರು.

ರೈತರ ಮೇಲಿನ ತಮ್ಮ ಕಾಳಜಿ ರೈತರಿಗೇ ಗೊತ್ತಿದೆ. ತಮಗೆ ಗೊತ್ತಿಲ್ಲದವರ ಬಗ್ಗೆ ತಾವು ಚಿಂತಿಸುವ ಅಗತ್ಯವಿಲ್ಲ ಎಂದ ಅವರು, ರೈತರ ಸಮಸ್ಯೆಗಳ ವಿಚಾರದಲ್ಲಿ ತಮ್ಮ ಹೋರಾಟ ಹಾಗೂ ಧ್ವನಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ತೊಗರಿಗೆ ನೆಟೆರೋಗ ಬಂದು 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ತಾವು ರೈತರ ಪರವಾಗಿ ಧ್ವನಿ ಎತ್ತಿದ್ದಾಗಿ ಅಲ್ಲಮಪ್ರಭು ಪಾಟೀಲ್ ಹೇಳಿದರು. ಆಗ ತಾವು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದು, ತಮ್ಮ ಆಗ್ರಹಕ್ಕೆ ಸ್ಪಂದಿಸಿದ ಸರ್ಕಾರ ಜಿಲ್ಲೆಯ ರೈತರಿಗೆ ಪರಿಹಾರ ನೀಡಿತ್ತು. ರೈತರನ್ನು ತಾವು ಎಂದಿಗೂ ಮರೆತಿಲ್ಲ ಎಂದು ತಿಳಿಸಿದರು.

ನಿಪ್ಪಾಣಿ ಊರಿನಲ್ಲಿ ನಕಲಿ ರಸಗೊಬ್ಬರ ಮಾರಾಟದ ದೊಡ್ಡ ಜಾಲದ ಬಗ್ಗೆ ರೈತರಿಂದ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾಗಿ ಅವರು ಹೇಳಿದರು. ರೈತರ ಪರ ಕೈಗೊಂಡ ಕ್ರಮಗಳನ್ನು ರೈತ ಬಂಧುಗಳು ಮೆಚ್ಚಿ ಹರಸಿದ್ದಾರೆ ಎಂದು ತಿಳಿಸಿದರು.

ತೊಗರಿ ಬೆಂಬಲ ಬೆಲೆಗೆ ಸರ್ಕಾರದ ಕ್ರಮ

ರೈತರಿಗೆ ತೊಗರಿಗೆ ಬೆಂಬಲ ಬೆಲೆ ನೀಡಬೇಕು, ತೊಗರಿ ಸಂಸ್ಕರಣೆಗೆ ಮಂಡಳಿ ರಚಿಸಬೇಕು ಹಾಗೂ ತಳಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ತಾವು ನಿರಂತರವಾಗಿ ಒತ್ತಾಯಿಸಿದ್ದಾಗಿ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ತಮ್ಮ ನಿರಂತರ ಒತ್ತಾಯಕ್ಕೆ ಸ್ಪಂದಿಸಿದ ಸರ್ಕಾರ ತೊಗರಿ ಮಂಡಳಿ ರಚಿಸಿದ್ದು, ಜಿಲ್ಲೆಯ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ. ತಾವು ಮೇಲ್ಮನೆ ಸದಸ್ಯರಾಗಿದ್ದಾಗಲೂ ಜಿಲ್ಲೆಯ ತೊಗರಿ ರೈತರಿಗೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ ಇತ್ತು. ಆಗಲೂ ಸದನದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದಾಗಿ ಅವರು ಹೇಳಿದರು.

ಮುಖ್ಯಮಂತ್ರಿಗಳ ಗಮನಕ್ಕೆ ಬಂದ ಬಳಿಕ ತಕ್ಷಣವೇ ತೊಗರಿ ಖರೀದಿ ಆರಂಭಿಸಲಾಯಿತು. ರಾಜ್ಯ ಸರ್ಕಾರ ಬೆಂಬಲ ಬೆಲೆಯ ಜೊತೆಗೆ ಪ್ರೋತ್ಸಾಹಕ ಬೆಲೆಯನ್ನೂ ಘೋಷಿಸಿ ತೊಗರಿ ರೈತರ ನೆರವಿಗೆ ನಿಂತಿದೆ. ಇದರಿಂದ ಜಿಲ್ಲೆಯ ಜನತೆ ಹಾಗೂ ರೈತರು ತಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಂದು ಅಲ್ಲಮಪ್ರಭು ಪಾಟೀಲ್ ಹೇಳಿದರು.

ಮಾಜಿ ಮೇಯರ್ ದಶರಥ ಬಾಬು ಒಂಟಿ, ಶ್ರೀಮತಿ ಚಂದ್ರಿಕಾ ಪರಮೇಶ್ವರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಮೇಶ್ ನಾಗನಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್ ಧನ್ನೂರ್, ಮುಖಂಡ ಶಿವಕುಮಾರ್ ಬಾಳಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button