ಅಪಘಾತ

ಖಾಸಗಿ ಶಾಲಾ ಬಸ್ ಡಿಕ್ಕಿಯಿಂದ ಮೂವರಿಗೆ ಗಾಯ: ಎಸ್‌ಆರ್‌ಎನ್ ಮೆಹ್ತಾ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ

ಶಾಲಾ ವಾಹನಗಳ ಅತಿವೇಗಕ್ಕೆ ಕಡಿವಾಣ ಹಾಕಿ, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯ

ಕಲಬುರಗಿ, ಆ.26- ನಗರದ ರಾಮಮಂದಿರದ ಸಮೀಪ ಉದನೂರು ರಸ್ತೆಯಲ್ಲಿ ಮಂಗಳವಾರ ಎಸ್‌ಆರ್‌ಎನ್ ಮೆಹ್ತಾ ಶಾಲೆಯ ಬಸ್ ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದು, ಗಾಯಾಳುಗಳು ಕಾಮರೆಡ್ಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ ಖಾಸಗಿ ಶಾಲೆಯ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಬಿ. ಹಯ್ಯಾಳಕರ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಘಾತದಲ್ಲಿ ಗಾಯಗೊಂಡಿರುವ ಮೂವರು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಶಾಲೆಯ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಖಾಸಗಿ ಶಾಲೆಗಳ ಶುಲ್ಕದ ಹೊರೆ ಹೆಚ್ಚಾಗುತ್ತಿರುವುದರ ಜೊತೆಗೆ, ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಖಾಸಗಿ ಶಾಲಾ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಹಲವು ಖಾಸಗಿ ಶಾಲೆಗಳು ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ತಮ್ಮದೇ ಶಾಲಾ ಬಸ್‌ಗಳನ್ನು ಹೊಂದಿದ್ದು, ನಿಗದಿತ ಸಮಯಕ್ಕೆ ಮಕ್ಕಳನ್ನು ಶಾಲೆಗೆ ತಲುಪಿಸುವ ಧಾವಂತದಲ್ಲಿ ಅತಿವೇಗವಾಗಿ ವಾಹನ ಚಲಾಯಿಸಲಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಶಾಲಾ ವಾಹನಗಳ ಅತಿವೇಗದ ಚಾಲನೆಯಿಂದ ಮಕ್ಕಳ ಜೀವಕ್ಕೆ ಮಾತ್ರವಲ್ಲದೆ, ಪೋಷಕರು ಹಾಗೂ ಸಾರ್ವಜನಿಕರಿಗೂ ಅಪಾಯ ಎದುರಾಗುತ್ತಿದೆ. ಕೆಲವು ಶಾಲೆಗಳು ಮಕ್ಕಳನ್ನು ತಡವಾಗಿ ಕರೆತಂದರೆ ದಂಡ ವಿಧಿಸುವ ಮೂಲಕ ಚಾಲಕರ ಮೇಲೆ ಒತ್ತಡ ಹೇರುತ್ತಿವೆ. ಇದರಿಂದ ದಂಡ ತಪ್ಪಿಸಲು ಪೋಷಕರು ದ್ವಿಚಕ್ರ ವಾಹನ, ಶಾಲಾ ಬಸ್, ಆಟೊ ಮತ್ತು ವ್ಯಾನ್‌ಗಳಲ್ಲಿ ಮಕ್ಕಳನ್ನು ಅತಿವೇಗದಲ್ಲಿ ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಇತ್ತೀಚೆಗೆ ಎಸ್‌ಆರ್‌ಎನ್ ಮೆಹ್ತಾ ಶಾಲೆಯ ವಾಹನವೊಂದು ಅಂಬಿಕಾ ನಗರದಲ್ಲಿ ಐದು ವರ್ಷದ ಬಾಲಕನಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿವೆ ಎಂದು ಹೇಳಿದರು.

ಇದೀಗ ರಾಮಮಂದಿರದ ಸಮೀಪ ಉದನೂರು ರಸ್ತೆಯಲ್ಲಿ ಎಸ್‌ಆರ್‌ಎನ್ ಮೆಹ್ತಾ ಶಾಲೆಯ ವಾಹನಕ್ಕೆ ಸಂಬಂಧಿಸಿದ ಮತ್ತೊಂದು ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಖಾಸಗಿ ಶಾಲೆಯ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳು ಹಾಗೂ ಪೋಷಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಲಾ ವಾಹನಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ

ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಲ್ಲಿ ತಮಿಳುನಾಡು ಮಾದರಿಯಲ್ಲಿ ಶಾಲಾ ಶುಲ್ಕದ ವಿವರಗಳನ್ನು ಒಳಗೊಂಡ ಫಲಕ ಅಳವಡಿಸಬೇಕು. ಮಕ್ಕಳನ್ನು ಕರೆದೊಯ್ಯುವ ಶಾಲಾ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದಲೇ ಮಕ್ಕಳನ್ನು ಕರೆದುಕೊಂಡು ಹೋಗುವ ಕ್ರಮ ಜಾರಿಗೊಳಿಸಬೇಕು ಎಂದು ದತ್ತು ಬಿ. ಹಯ್ಯಾಳಕರ ಒತ್ತಾಯಿಸಿದರು.

ಮುಖ್ಯವಾಗಿ ಶಾಲಾ ವಾಹನಗಳ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಶಾಲೆಗಳು ಸಂಚಾರ ನಿಯಮಗಳಿಗೆ ಸಂಬಂಧಿಸಿದ ಪ್ರಮುಖ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜುಗಳು ಕೂಡ ವಾಹನಗಳ ಸಂಚಾರ ಸುರಕ್ಷತೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ್ ಬಿ. ಬಿದರಕರ್, ಸುಭಾಷ್ ಬನಪಟ್ಟೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಗೋರಂಪಳ್ಳಿ, ಶ್ರೀದೇವಿ ಮುತ್ತಂಗಿ, ಭಜರಂಗಸಿಂಗ್, ಅಕ್ಷಯ ಉಪಾಧ್ಯಾಯ, ರೋಹಿತ್ ಪಾಟೀಲ್, ಸಚಿನಸಿಂಗ್ ಠಾಕೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button