ಅಪಘಾತ

ಕಡೆಚೂರು ಔಷಧ ತಯಾರಿಕಾ ಘಟಕದಲ್ಲಿ ವಿಷಾನಿಲ ಸೋರಿಕೆ: ಮೂವರು ಕಾರ್ಮಿಕರ ದುರ್ಮರಣ

ಇಬ್ಬರ ಸ್ಥಿತಿ ಗಂಭೀರ; ಸುರಕ್ಷತಾ ಲೋಪದ ಆರೋಪದಡಿ ಎಫ್‌ಐಆರ್‌, ತಾಂತ್ರಿಕ ತನಿಖೆಗೆ ಆದೇಶ

ಯಾದಗಿರಿ, ಆ.5: ಜಿಲ್ಲೆಯ ಶಹಾಪುರ ತಾಲೂಕಿನ ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ಔಷಧ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ವಿಷಾನಿಲ ಸೋರಿಕೆ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮಧ್ಯಪ್ರದೇಶ ಮೂಲದ ವಿಕ್ರಂಸಿಂಗ್ (20–25), ಸಂಜಯ್‌ಸಿಂಗ್ (20–25) ಹಾಗೂ ತೆಲಂಗಾಣದ ಮಹಬೂಬ್‌ನಗರ ಮೂಲದ ಕಟ್ಲ ಗಣೇಶ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಮಂಚಾಲ ಹೇಮಂತ್ ಹಾಗೂ ಮಂಚಾಲ ಶಿವಕುಮಾರ್ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ರಾಹುಲ್ ಪಾಂಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟಕದಲ್ಲಿನ ಸ್ಟೇನ್‌ಲೆಸ್ ಸ್ಟೀಲ್ ರಿಯಾಕ್ಟರ್‌ನಲ್ಲಿ ಥಿಯೋನಿಲ್ ಕ್ಲೋರೈಡ್ ರಾಸಾಯನಿಕ ಬಳಕೆಯ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಉತ್ಪತ್ತಿಯಾಗುವ ಸಲ್ಫರ್ ಡೈಆಕ್ಸೈಡ್ ಅನಿಲವನ್ನು ಪೈಪ್‌ಲೈನ್ ಮೂಲಕ ಸ್ಕ್ರಬ್ಬರ್‌ಗೆ ಸಾಗಿಸಲಾಗುತ್ತಿತ್ತು. ಆದರೆ ಮುಂಜಾನೆ ಸುಮಾರು 1ರಿಂದ 2 ಗಂಟೆಯ ನಡುವೆ ಪೈಪ್‌ಲೈನ್‌ನಲ್ಲಿ ಉಂಟಾದ ಸೋರಿಕೆಯಿಂದ ವಿಷಾನಿಲ ಹೊರಬಂದಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅದರ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಸಿಲ್ ಲ್ಯಾಬೊರೇಟರೀಸ್ ಸಂಸ್ಥೆ, ಅದರ ವ್ಯವಸ್ಥಾಪಕ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ದುರಂತದ ನಿಖರ ಕಾರಣ ಹಾಗೂ ತಾಂತ್ರಿಕ ಲೋಪಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ವಿಧಿವಿಜ್ಞಾನ ತಜ್ಞರಿಂದ ತನಿಖೆ ನಡೆಸಲಾಗುತ್ತಿದೆ. ಮೃತಪಟ್ಟ ಹಾಗೂ ಗಾಯಗೊಂಡ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಆಡಳಿತ ಸಂಸ್ಥೆಗೆ ಸೂಚನೆ ನೀಡಿದೆ.

ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button